ಬೆಂಗಳೂರು: ವಾಲ್ಮೀಕಿ ನಿಗಮದ ಕೋಟ್ಯಾಂತರ ರೂ. ಹಗರಣ ಪ್ರಕರಣದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರು ಅಂತ ಹೇಳಿಲ್ಲ, ಕಚೇರಿ ಎಂದು ಹೇಳಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಹಗರಣದಲ್ಲಿ ತಮ್ಮ ಹೆಸರು ಮುನ್ನಲೆಗೆ ಬಂದಿರುವ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇ 26 ರಂದು ನಾನು ಕಚೇರಿಗೆ ಹೋಗಿಲ್ಲ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ನಾನು ಕಚೇರಿಗೆ ಹೋಗಿರಲಿಲ್ಲ. ಕಚೇರಿಯಲ್ಲಿ ಸಭೆ ನಡೆದಿದೆ ಅಂದ್ರೆ ತನಿಖೆಯಾಗಲಿ. ನನ್ನ ಹೆಸರು ಯಾಕೆ ಬಂದಿದೆ ಎಂದು ತಿಳಿದಿಲ್ಲ. ಮಾಧ್ಯಮಗಳಲ್ಲಿ ನೋಡಿದಾಗಲೇ ನನಗೆ ಗೊತ್ತಾಗಿದ್ದು. ಯಾರು ಯಾವ ತನಿಖೆ ಬೇಕಾದ್ರೂ ಮಾಡಿಕೊಳ್ಳಲಿ ಎಂದು ತಿಳಿಸಿದರು.
ವೈದ್ಯಕೀಯ ಸಚಿವ ಕಚೇರಿ ಎಂದು ಹೇಳಿದ್ದಾರೆಯೇ ಹೊರತು ನನ್ನ ಹೆಸರು ಹೇಳಿಲ್ಲ. ಸಚಿವರ ಕಚೇರಿ ಎಂದರೆ ಶಾಸಕರು ಬರುತ್ತಾರೆ, ಹೋಗ್ತಾರೆ. ಆದರೆ ಅಂದು ನಾನು ಕಚೇರಿಗೆ ಹೋಗಿಲ್ಲ. ಸತ್ಯ ಏನು ಅಂತ ಸಿಸಿ ಕ್ಯಾಮೆರಾ ನೋಡಿದರೆ ತಿಳಿಯುತ್ತೆ. ನನಗೆ ಸಂಬಂಧವೇ ಇಲ್ಲ ಅಂದಮೇಲೆ ನನ್ನ ರಾಜೀನಾಮೆ ಕೇಳಿದರೆ ಹೇಗೆ ಎಂದವರು ಪ್ರಶ್ನಿಸಿದ್ದಾರೆ.
ಸಭೆ ನಡೆದಿರುವ ಬಗ್ಗೆ ಕಚೇರಿ ಸಿಬ್ಬಂದಿಯನ್ನು ಕೇಳಿದಾಗ ಯಾವ ಸಭೆಯೂ ನಡೆದಿಲ್ಲ ಎಂದಿದ್ದಾರೆ. ವಿಚಾರಣೆಗೆ ಬನ್ನಿ ಅಂದರೆ ಬರುತ್ತೇನೆ. ನಾನು ಪ್ರಮಾಣಿಕವಾಗಿ ಕೆಲಸ ಮಾಡೋನು. ಈ ರೀತಿ ನಾನು ಮಾಡುವವನಲ್ಲ. ನನ್ನ ಕಚೇರಿಯಲ್ಲಿ ಸಭೆ ನಡೆದಿದ್ದರೆ ಕ್ರಮ ತಗೊಳ್ಳಿ. ಆದರೆ ಇದರಲ್ಲಿ ನನ್ನ ಪಾತ್ರ ಇಲ್ಲವೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.