ಚಿಕ್ಕಮಗಳೂರು :ಖಾಸಗಿ ಕ್ಲಿನಿಕ್ ವೈದ್ಯ ನೀಡಿದ ಇಂಜೆಕ್ಷನ್ನಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಏಳು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ನಡೆದಿದೆ.
ಅಜ್ಜಂಪುರ ಸಮೀಪದ ಕೆಂಚಾಪುರ ಗ್ರಾಮದ ಅಶೋಕ್ ಅವರ 7 ವರ್ಷದ ಮಗ ಸೋನೇಶ್ ಕಳೆದ ನಾಲ್ಕು ದಿನಗಳ ಹಿಂದೆ ತೀವ್ರ ಜ್ವರದಿಂದ ಬಳಲುತ್ತಿದ್ದ. ಪೋಷಕರು ಸೋನೇಶ್ ನನ್ನು ಅಜ್ಜಂಪುರ ಪಟ್ಟಣದ ಖಾಸಗಿ ಕ್ಲಿನಿಕ್ ವೈದ್ಯ ವರುಣ್ ಬಳಿ ಸೆಪ್ಟೆಂಬರ್ 24 ರಂದು ಚಿಕಿತ್ಸೆಗಾಗಿ ಕರೆದೊಯ್ದಿದ್ರು. ವೈದ್ಯ ವರುಣ್, ಬಾಲಕನ ಸೊಂಟಕ್ಕೆ ಇಂಜೆಕ್ಷನ್ ಮಾಡಿದ್ದು ಇದೆ ಇಂಜೆಕ್ಷನ್ ಓವರ್ ಡೋಸ್ ಆಗಿ ಬಾಲಕನ ಜೀವವನ್ನೇ ತೆಗೆದಿದೆ.
ವೈದ್ಯ ವರುಣ್ ನೀಡಿದ ಓವರ್ ಡೋಸ್ ಇಂಜೆಕ್ಷನ್ ನಿಂದ ಬಾಲಕನ ಸೊಂಟದ ಭಾಗದಲ್ಲಿ ಬೊಬ್ಬೆಗಳು ಕಾಣಿಸಿಕೊಂಡಿದ್ದವು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸೋನೇಶ್ ಮೃತಪಟ್ಟಿದ್ದಾರೆ.
ಶವ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಸರ್ಕಾರಿ ಆಸ್ಪತ್ರೆಗೆ ಬಾಲಕನ ಮೃತದೇಹವನ್ನು ರವಾನೆ ಮಾಡಲಾಗಿದೆ. ಈ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಡಾ ವರುಣ್ ವಿರುದ್ಧ ಪ್ರಕರಣ ದಾಖಲಾಗಿದೆ.