ಕೋಲ್ಕತ್ತ : ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣ ಖಂಡಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿಯ ನಿದ್ದೆಗೆಡಿಸಿದ್ದು, ತಮ್ಮಿಂದ ಸಮಸ್ಯೆ ಸರಿಪಡಿಸಲು ಸಾಧ್ಯವಿಲ್ಲ ಎಂದು ಕ್ಷಮೇ ಕೇಳಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಲು ಸಿದ್ದ ಎಂದು ಹೇಳಿದ್ದಾರೆ.
ಕೋಲ್ಕತ್ತದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ನ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಮುಷ್ಕರವನ್ನು ಹಿಂಪಡೆಯುವಂತೆ ಮನವೊಲಿಸುವ ಭಾಗವಾಗಿ ಕರೆದಿದ್ದ ಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
‘ಮೃತ ವೈದ್ಯೆಯ ನಾವಿಗೆ ನ್ಯಾಯ ದೊರಕಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಗಡುವನ್ನು ಪದೇ ಪದೇ ಮುಂದೂಡುತ್ತಿರುವುದಕ್ಕೆ ಜನರ ಕ್ಷಮೆ ಕೋರುತ್ತೇನೆ. ಕಳೆದ 33 ದಿನಗಳಿಂದ ಕೇಳಿಬರುತ್ತಿರುವ ನಿಂದನೆಗಳು ಹಾಗೂ ಅವಮಾನಗಳನ್ನು ಸಹಿಸಿಕೊಂಡು ಸಾಗುತ್ತಿದ್ದೇನೆ. ಪ್ರತಿಭಟನಾ ನಿರತ ವೈದ್ಯರು ಕರ್ತವ್ಯಕ್ಕೆ ಮರಳಬೇಕು ಹಾಗೂ ಮರಳದಿದ್ದರೆ ಕ್ರಮ ಕೈಗೊಳ್ಳಬೇಕು ಎಂಬ ಸುಪ್ರೀಂ ಕೋರ್ಟ್‌ನ ಆದೇಶವಿದೆ. ಆದರೆ ಪ್ರತಿಭಟನಾ ನಿರತ ವೈದ್ಯರ ಮೇಲೆ ಯಾವುದೇ ರೀತಿಯ ಶಿಕ್ಷೆ ವಿಧಿಸದೆ ಅವರನ್ನು ಕರ್ತವ್ಯಕ್ಕೆ ಸೇರಿಸಿಕೊಳ್ಳುವ ಭರವಸೆ ನೀಡುತ್ತೇನೆ’ ಎಂದು ಸುದ್ದಿಗಾರರಿಗೆ ಹೇಳಿದರು.
ಜನರ ಹಿತಕ್ಕಾಗಿ ನಾನು ರಾಜೀನಾಮೆ ನೀಡಲು ಸಿದ್ಧ. ಪ್ರಕರಣದಲ್ಲಿ ನ್ಯಾಯ ದೊರಕಿಸಬೇಕು ಎಂಬ ಇಚ್ಛೆ ನನಗೂ ಇದೆ. ಮಾನವೀಯ ದೃಷ್ಟಿಯಿಂದ ವೈದ್ಯರು ರಾಜ್ಯದ ರೋಗಿಗಳ ಹಿತ ಕಾಯುತ್ತಾರೆ ಹಾಗೂ ಆ ನಿಟ್ಟಿನಲ್ಲಿ ಚರ್ಚೆಗೆ ಬರುತ್ತಾರೆ ಎಂಬ ವಿಶ್ವಾಸವಿತ್ತು. ಕಳೆದ ಎರಡು ಗಂಟೆಗಳಿಂದ ಕಾದಿದ್ದೇನೆ. ಸಮಸ್ಯೆ ಬಗೆಹರಿಸುವ ಇಂಗಿತ ನನಗೂ ಇದೆ. ಆದರೆ ಅದು ಸಾಧ್ಯವಾಗದಿರುವುದಕ್ಕೆ ರಾಜ್ಯದ ಜನರ ಕ್ಷಮೆ ಕೋರುತ್ತೇನೆ’ ಎಂದಿದ್ದಾರೆ.