ಶಬರಿಮಲೆ: ಕೇರಳದ ವಯನಾಡ್ ಮೂಲದ ಶತಾಯುಷಿಯೊಬ್ಬರು 41 ದಿನಗಳ ಕಠಿಣ ವ್ರತ ಕೈಗೊಂಡು ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಭೇಟಿ ನೀಡಿ ತಮ್ಮ ಹರಕೆಯನ್ನು ತೀರಿಸಿದ್ದಾರೆ.
ಶತಾಯುಷಿ ವಯನಾಡಿನ ಮೂನ್ನನಕುಜಿಯ ಪಾರುಕುಟ್ಟಿಯಮ್ಮ 41 ದಿನಗಳ ವ್ರತವನ್ನು ಮಾಡಿ ತನ್ನ ಮಕ್ಕಳು ಹಾಗೂ ಮೊಮ್ಮಕಳೊಂದಿಗೆ ಬೆಟ್ಟದ ದೇಗುಲ ಶಬರಿಮಲೆಗೆ ತನ್ನ ಚೊಚ್ಚಲ ಯಾತ್ರೆ ಕೈಗೊಂಡಿದ್ದಾರೆ. ನೂರು ವರ್ಷದ ಮಹಿಳೆಯೊಬ್ಬರು ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಚೊಚ್ಚಲ ಭೇಟಿ ನೀಡಿದ್ದರಿಂದ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.
ಮೊದಲ ಬಾರಿಗೆ ಶಬರಿಮಲೆ ಯಾತ್ರೆ ಕೈಗೊಂಡ ಪಾರುಕುಟ್ಟಿಯಮ್ಮ ದಾರಿಯುದ್ದಕ್ಕೂ, ಕಡಂಪುಳ, ಗುರುವಾಯೂರ್, ವೈಕೋಮ್ ಮತ್ತು ಎಟ್ಟುಮನೂರ್ ಮುಂತಾದ ದೇವಾಲಯಗಳಲ್ಲಿ ದರ್ಶನ ಪಡೆದು ಶಬರಿಮಲೆ ತಲುಪಿದ್ದಾರೆ. ಪಾರುಕುಟ್ಟಿಯಮ್ಮ ಆಗಮಿಸಿದ ಸುದ್ದಿ ತಿಳಿದ ದೇವಸ್ವಂ ಮಂಡಳಿಯವರು ಆಕೆಗೆ ಪೊನ್ನಡ (ಚಿನ್ನದ ದಾರದಿಂದ ನೇಯ್ದ ಬಟ್ಟೆ) ನೀಡಿ ಗೌರವಿಸಿದ್ದಾರೆ.