ಬೆಂಗಳೂರು: ಶಾಂತಿಯುತವಾಗಿ ಜನರಿಗೆ ತೊಂದರೆ ಆಗದಂತೆ ಬಂದ್ ಮಾಡಿದ್ರೆ ಸರ್ಕಾರ ಅದಕ್ಕೆ ಅಡಚಣೆ ಮಾಡುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬಂದ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪ್ರತಿಭಟನೆ ಮಾಡಲು, ರಾಜ್ಯದ ಹಿತ ಕಾಪಾಡಲು ನಾವು ಎಲ್ಲಾ ರೀತಿಯ ಸಹಕಾರ ಕೊಡುತ್ತೇವೆ. ನಮ್ಮ ನೆಲ, ಜಲ, ಭಾಷೆ ಎಲ್ಲರೂ ಉಳಿಸಿಕೊಳ್ಳಬೇಕು. ಯಾವುದೇ ಪಾರ್ಟಿ ಆದರೂ ಉಳಿಸಿಕೊಳ್ಳಬೇಕು. ನಮ್ಮ ಪಕ್ಷದವರು ಏನು ಮಾಡುವುದು ಎಂದು ನನಗೆ ಕರೆ ಮಾಡಿದ್ದರು. ನಿಮ್ಮ ರಕ್ಷಣೆ, ಯಾರು ತಪ್ಪಬೇಡಿ ಎಂದು ಹೇಳಿದ್ದೇನೆ.
ನಿಮ್ಮ ಹೋರಾಟಕ್ಕೆ ನಾವು ಅಡಚಣೆ ಮಾಡುವುದಿಲ್ಲ. ಆದರೆ ಎಲ್ಲರೂ ಶಾಂತಿ ಕಾಪಾಡಬೇಕು. ಜನರಿಗೆ ತೊಂದರೆ ಆಗಬಾರದು. ಹೋರಾಟ ಮಾಡಲಿ, ಅದು ಅವರ ಹಕ್ಕು. ಆದರೆ ಶಾಂತಿ ಕಾಪಾಡಬೇಕು. ಯಾವ ಪಕ್ಷದವರಿಗೂ, ಯಾರಿಗೂ ನಾವು ತೊಂದರೆ ಕೊಡಲು ಹೋಗಲ್ಲ ಎಂದರು.
ನಾವು ನಮ್ಮ ರಾಜ್ಯದ ಹಕ್ಕು ಉಳಿಸಲು ಕೆಲಸ ಮಾಡುತ್ತಿದ್ದೇವೆ. ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪು ಇದೆ. ಅದನ್ನು ಅರಿತುಕೊಳ್ಳಬೇಕು. ಟಿವಿಯವರು ಕರೆಯುತ್ತಾರೆ ಹೆಸರು ಕೊಡುತ್ತಾರೆ ಎಂದು ಮಾತನಾಡಿ ನಾಳೆ ಕೋರ್ಟ್‌ನಲ್ಲಿ ಸಮಸ್ಯೆ ಆಗೋದು ಬೇಡ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಬಂದ್ ಮಾಡುವವರು ತೀರ್ಮಾನ ಮಾಡಲಿ ಎಂದು ಸಲಹೆ ನೀಡಿದರು.
				
															
                    
                    
                    
                    
                    

































