ಬೆಂಗಳೂರು: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛ ಮಾಡಿಸಿದ ಪ್ರಕರಣ ಮಾಸುವ ಮುನ್ನವೇ ರಾಜಧಾನಿ ಬೆಂಗಳೂರಿನಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛತೆಗೊಳಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು,ನಗರ ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಅವರು ಬಿಬಿಎಂಪಿ, ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದಾರೆ.
ವಿಧಾನಸೌಧದಲ್ಲಿ ಬಿಬಿಎಂಪಿ, ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಸಭೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಭೆ ಮಾಡಲಿದ್ದು, ಅಂದ್ರಹಳ್ಳಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್ ಮಾಡಿಸಿರುವುದ ವರದಿ ಪಡೆದುಕೊಳ್ಳಲಿದ್ದಾರೆ. ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ನಿರ್ಧರಿಸಿದ್ದಾರೆ.
ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಘಟನೆ ಸಂಬಂಧ ಮಧ್ಯಾಹ್ನ 3 ಗಂಟೆಗೆ ಸಭೆ ಕರೆದಿದ್ದೇನೆ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ. ಇತ್ತೀಚೆಗೆ ಆದ ಘಟನೆ ಬಗ್ಗೆಯೂ ಕ್ರಮ ತೆಗೆದುಕೊಂಡಿದ್ದೇವೆ. ಶಾಲಾ ಮಕ್ಕಳನ್ನು ಯಾರೂ ದುರುಪಯೋಗ ಮಾಡಿಕೊಳ್ಳಬಾರದು. ಎನ್‌ಎಸ್‌ಎಸ್ ಇತ್ತು, ಗಿಡ ನೆಡುವುದು, ಸ್ವಚ್ಛತೆ ಮಾಡುವ ಕೆಲಸ ಮಾಡುತ್ತಿದ್ದರು. ಆದ್ರೆ ಶೌಚಾಲಯ ಕ್ಲೀನ್ ಮಾಡಿಸುವ ಅಧಿಕಾರ ಯಾರಿಗೂ ಕೊಟ್ಟಿಲ್ಲ ಎಂದು ಖಡಕ್ ಆಗಿ ಹೇಳಿದರು.