ಶಿವಮೊಗ್ಗ: ಸರ್ಕಾರಿ ಶಾಲೆಯಲ್ಲಿ 2ನೇ ತರಗತಿ ವಿದ್ಯಾರ್ಥಿನಿಗೆ ಶಿಕ್ಷಕರೊಬ್ಬರು ಶಾಲೆಯಲ್ಲಿ ಬಲವಂತವಾಗಿ ಮೊಟ್ಟೆ ತಿನ್ನಿಸಿದ ಆರೋಪ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅಮೃತ ಗ್ರಾಮದಲ್ಲಿ ನಡೆದಿದೆ.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ವಿತರಣೆ ಮಾಡಲಾಗುತ್ತಿದ್ದು, ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ವಿತರಿಸಲಾಗುತ್ತಿದೆ. ಮಕ್ಕಳಿಗೆ ಯಾವುದು ಬೇಕು ಅಂತಾ ಮೊದಲೇ ಶಿಕ್ಷಕರು ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಮಾಹಿತಿ ಸಹ ಪಡೆದಿರುತ್ತಾರೆ. ಆದ್ರೆ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಅಮಾನುಷ ಘಟನೆಯೊಂದು ನಡೆದಿದೆ.
ಅಮೃತ ಗ್ರಾಮದ ಸರ್ಕಾರಿ ಕೆಪಿಎಸ್ ಪ್ರಾಥಮಿಕ ಶಾಲೆಯ ಶಿಕ್ಷಕ ಬಲವಂತವಾಗಿ ಬ್ರಾಹ್ಮಣ ವಿದ್ಯಾರ್ಥಿನಿಗೆ ಮೊಟ್ಟೆ ತಿನ್ನಿಸಿದ್ದಾರೆ. ಮೊಟ್ಟೆ ತಿಂದ ಬಳಿಕ ವಿದ್ಯಾರ್ಥಿನಿಯ ಆರೋಗ್ಯದಲ್ಲಿ ಏರುಪೇರಾಗಿದ್ದು, ಧಾರ್ಮಿಕ ಆಚರಣೆಗೆ ಧಕ್ಕೆ ಉಂಟಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.ಇಂತಹ ಘಟನೆಗಳು ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿನಿಯ ತಂದೆ ಶ್ರೀಕಾಂತ್, ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರ ಹಾಗೂ ಡಿಡಿಪಿಐ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.