ರೈತರು, ಸೈನಿಕರು, ಶಿಕ್ಷಕರು ಆದರ್ಶ ಸಮಾಜದ ಆಧಾರ ಸ್ತಂಭಗಳು. ಇವರು ಸಮಾಜದ, ದೇಶದ ಭವಿಷ್ಯ ರೂಪಿಸುವ ಕಾಯಕ ಜೀವಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ಜಂಟಿಯಾಗಿ ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನದ ಅಂಗವಾಗಿ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ 43 ಮಂದಿ ಪುರಸ್ಕೃತ ಶಿಕ್ಷಕರುಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಬಳಿಕ ಮಾತನಾಡಿದ ಅವರು, ವಿದ್ಯೆ ಕಲಿಸುವುದಷ್ಟೆ ಶಿಕ್ಷಣದ ಉದ್ದೇಶ ಅಲ್ಲ. ಮಕ್ಕಳನ್ನು ವಿಶ್ವ ಮಾನವರನ್ನಾಗಿ ರೂಪಿಸುವುದೂ ಶಿಕ್ಷಣದ ಗುರಿ ಎಂದು ನುಡಿದರು.
ಡಿಗ್ರಿ ಪಡೆದು, ಡಾಕ್ಟರೇಟ್ ಪಡೆದರೂ ಅವರಲ್ಲಿ ವೈಜ್ಞಾನಿಕ ಮನೋಭಾವ, ವೈಚಾರಿಕತೆ ಬೆಳೆಯದಿದ್ದರೆ, ತಲೆಯೊಳಗೆ ಮೌಡ್ಯ ತುಂಬಿಕೊಂಡಿದ್ದರೆ ಅವರನ್ನು ಸುಶಿಕ್ಷಿತರು ಎಂದು ಕರೆಯಲು ಸಾಧ್ಯವಿಲ್ಲ. ಡಿಗ್ರಿ ಪಡೆದವರೇ ಹೆಚ್ಚೆಚ್ವು ಜಾತಿವಾದಿಗಳಾದರೆ ಈ ಚಂದಕ್ಕೆ ಶಿಕ್ಷಣ ಏಕೆ ಪಡೆಯಬೇಕು ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರ ಬಂದ ಬಳಿಕ 10 ಸಾವಿರ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಿದ್ದೂ ಸೇರಿ ಹಲವು ಕಾರ್ಯಕ್ರಮ ಮಾಡಿದೆವು. ಪರಿಶಿಷ್ಟ ಜಾತಿ, ವರ್ಗದ ಮಕ್ಕಳಿಗೆ ನಾವು ನಮ್ಮ ಸರ್ಕಾರದ ಅವಧಿಯಲ್ಲಿ ಲ್ಯಾಪ್ ಟಾಪ್ ನೀಡುವ ಕಾರ್ಯಕ್ರಮ ಆರಂಭಿಸಿದೆವು. ನಂತರ ಬಂದ ಸರ್ಕಾರ ಇದನ್ನು ಸ್ಥಗಿತಗೊಳಿಸಿತ್ತು. ಈಗ ಮತ್ತೆ ನಾವು ಅಧಿಕಾರಕ್ಕೆ ಬಂದು ಲ್ಯಾಪ್ ಟಾಪ್ ಕೊಡುವುದನ್ನು ಮುಂದುವರೆಸಿದ್ದೇವೆ ಎಂದರು.