ಚಿತ್ರದುರ್ಗ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ “ಶಿಕ್ಷಣ-ಸಂಘಟನೆ-ಹೋರಾಟ” ಎಂಬ ಮೂರು ಸಿದ್ಧಾಂತಗಳನ್ನು ನಾವೆಲ್ಲರೂ ಪಾಲಿಸಬೇಕಾದ ಜೀವನದ ಮಂತ್ರವಾಗಿವೆ. ಶಿಕ್ಷಣದಿಂದ ಜ್ಞಾನ, ಹೋರಾಟದಿಂದ ಹಕ್ಕುಗಳು, ಸಂಘಟನೆಯಿಂದ ಶಕ್ತಿ ಪಡೆದುಕೊಳ್ಳುವ ಮಾರ್ಗದಲ್ಲಿ ನಡೆಯುವುದು ನವ ಭಾರತ ನಿರ್ಮಾಣದ ಪ್ರಥಮ ಹೆಜ್ಜೆಯಾಗಿದೆ ಎಂದು ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ತ.ರಾ.ಸು. ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಲಾದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಅಂಬೇಡ್ಕರ್ ಅವರು ಕೇವಲ ಸಮಾಜಸೇವಕರಲ್ಲ, ಅವರು ಭಾರತದ ಪುನರ್ ನಿರ್ಮಾಣಕ್ಕೆ ಕೊಡುಗೆ ನೀಡಿದ ಮಹಾತ್ಮ. ಶೋಷಿತರಿಗೆ ಧೈರ್ಯ, ಶಿಕ್ಷಣ, ಆತ್ಮಗೌರವ ಮತ್ತು ನ್ಯಾಯದ ಮಾರ್ಗವನ್ನು ತೋರಿದ ದಾರಿದೀಪ. ಅವರ ಜೀವನದ ಪ್ರಮುಖ ಕೊಂಡಿಯಾಗಿದ್ದು ಭಾರತದ ಸಂವಿಧಾನ. ಅವರು ಅಧ್ಯಕ್ಷರಾಗಿದ್ದ ಕರಡು ಸಮಿತಿಯ ಮಾರ್ಗದರ್ಶನದಲ್ಲಿ ರೂಪುಗೊಂಡ ನಮ್ಮ ಸಂವಿಧಾನವು ಸಮಾನತೆ, ಧರ್ಮನಿರಪೇಕ್ಷತೆ, ಸಾಮಾಜಿಕ ನ್ಯಾಯ ಮತ್ತು ವ್ಯಕ್ತಿಗತ ಹಕ್ಕುಗಳನ್ನು ನಮ್ಮೆಲ್ಲರಿಗೂ ನೀಡುವ ಪವಿತ್ರ ಗ್ರಂಥವಾಗಿದೆ.
12ನೇ ಶತಮಾನದಲ್ಲಿ ಈ ಭೂಮಿಯಲ್ಲಿ ಸಮಾನತೆಯ ಸಂದೇಶ ಸಾರಿ ಹೋಗಿದ್ದ ಮಹಾ ಮಾನವತಾವಾದಿ ಬಸವಣ್ಣ ಮತ್ತು 20ನೆಯ ಶತಮಾನದಲ್ಲಿ ಅದೇ ಸಂದೇಶವನ್ನು ಜಾರಿಗೊಳಿಸಿದ ಡಾ|| ಬಾಬಾ ಸಾಹೇಬ ಅಂಬೇಡ್ಕರ್ ಇಬ್ಬರಲ್ಲೂ ಹಲವು ಸಾಮ್ಯತೆಗಳು ಕಾಣುತ್ತವೆ. ಇಬ್ಬರದು ಧ್ಯೆಯ, ಉದ್ದೇಶ ಒಂದೇ ಆಗಿತ್ತು, ಸಮಾಜದಲ್ಲಿ ಮೇಲು, ಕೀಳು ಎನ್ನುವ ಭಾವನೆ ಇರಬಾರದು, ಎಲ್ಲರಿಗೂ ಬದುಕಿನ ಹಕ್ಕು ಸಮಾನವಾಗಿ ಸಿಗಬೇಕು. ನೈಸರ್ಗಿಕ ಸಂಪನ್ಮೂಲಗಳ ಬಳಕೆಗೆ ಸಮಾನ ಅಧಿಕಾರವಿರಬೇಕು, ಎಲ್ಲಾ ಹಕ್ಕುಗಳು ಸಮಾನವಿರಬೇಕು ಎನ್ನುವ ಉದ್ದೇಶದೊಂದಿಗೆ ಅರಿವಿನ ಸಮಾಜ ನಿರ್ಮಿಸಿ, ಹೊಸ ಬೆಳಕನ್ನು ಕಾಣುವ ಹೊಸ ಕನಸು ಹೊತ್ತವರು ಡಾ. ಅಂಬೇಡ್ಕರ್ ಅವರು ಎಂದರು.
ಸಮಾಜದಲ್ಲಿನ ಅಸಮಾನತೆಗಾಗಿ ಅಂಬೇಡ್ಕರ್ ಅವರಿಗೆ ಬಹಳ ದೊಡ್ಡಮಟ್ಟದ ಅಸಮಾಧಾನವಿತ್ತು, ಆದರೆ ಅದಕ್ಕಾಗಿ ಅವರೆಂದೂ ತಾಳ್ಮೆ ಕಳೆದುಕೊಳ್ಳಲಿಲ್ಲ. ಅಹಿಂಸೆಯ ಮಾರ್ಗ ತುಳಿಯಲಿಲ್ಲ ಅತ್ಯಂತ ಸಮಾಧಾನದಿಂದಲೇ ಅರಿವು ಮೂಡಿಸಲು ಪ್ರಯತ್ನಿಸಿದರು, ಅದೇ ತತ್ವದ ಆಧಾರದ ಮೇಲೆ ಸಂವಿಧಾನವನ್ನು ರಚಿಸಿದರು. ಅವರ ಜೀವಿತದುದ್ದಕ್ಕೂ ಯಾರನ್ನೂ ದ್ವೇಷಿಸಲಿಲ್ಲ, ಯಾರ ಹಕ್ಕುಗಳನ್ನು ಅಧಿಕಾರವನ್ನು, ಅವರು ಕಸಿದುಕೊಳ್ಳಲು ಬಯಸಿರಲಿಲ್ಲ. ಮನುಷ್ಯನಾಗಿ ಹುಟ್ಟಿದವರು ಹೇಗೆ ಬದುಕಬಹುದು ಎಂದು ತೋರಿಸುವ ಮೂಲಕ ಇಡೀ ಮಾನವ ಕುಲಕ್ಕೆ ಆದರ್ಶರಾದರು. ಕಾನೂನು ತಜ್ಞರಾಗಿ ಸಮಾಜ ಸುಧಾರಕರಾಗಿ ಅರ್ಥ ಶಾಸ್ತ್ರಜ್ಞರಾಗಿ, ಪತ್ರಕರ್ತರಾಗಿ, ತತ್ವಜ್ಞಾನಿಯಾಗಿ, ಸಾಹಿತಿಯಾಗಿ ತಮ್ಮ ಇರುವಿಕೆಯನ್ನು ತೋರ್ಪಡಿಸಿದರು. ಹಾಗಾಗಿ ಅವರ ಹೆಸರೇ ನಮಗೆಲ್ಲಾ ಸ್ಪೂರ್ತಿ, ಸಾಧನೆಗೆ ಪ್ರೇರಣೆ, ಅವರ ಬದುಕು ತತ್ವ ಆದರ್ಶಗಳು ನಮ್ಮೆಲ್ಲರ ಪಾಲಿಗೆ ಸರ್ವಕಾಲಿಕ ಮಾರ್ಗದರ್ಶಕ. ಸಮಾನತೆಯಿಂದಲೆ ಪ್ರಗತಿ ಎನ್ನುವುದು ಅವರ ಪರಮೋಚ್ಚ ನಂಬಿಕೆಯಾಗಿತ್ತು ಎಂದರು.
ಅಂಬೇಡ್ಕರ್ ಅವರ ಕನಸಿನಂತೆ, ಎಲ್ಲಾ ಹಂತಗಳಲ್ಲಿಯೂ ಶಿಕ್ಷಣ-ಸಮಾನತೆಯನ್ನು ನೀಡುವಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಕಂಕಣ ಬದ್ಧವಾಗಿದೆ. ಅಂಬೇಡ್ಕರ್ ಜಯಂತಿ ಎನ್ನುವುದು ಕೇವಲ ಪುμÁ್ಪರ್ಚನೆಗೆ ಸೀಮಿತವಾಗಬಾರದು. ಇದು ಪ್ರತಿಜ್ಞಾ ದಿನವಾಗಬೇಕು, ನಾವು ಜಾತಿಯ ಹೆಸರಿನಲ್ಲಿ ನಡೆಯುವ ಯಾವುದೇ ಹಿಂಸೆಯನ್ನು ವಿರೋಧಿಸೋಣ. ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣ, ಮಹಿಳೆಯರಿಗೆ ಗೌರವ, ದಲಿತರಿಗೆ ಸವಲತ್ತು, ಪರಿಶ್ರಮಿಕರಿಗೆ ಪರಿಗಣನೆ, ಎಲ್ಲ ವರ್ಗದ ಜನತೆಗೆ ಸನ್ಮಾನ, ಈ ಎಲ್ಲವನ್ನು ನಾವು ಕಲ್ಪಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್ಪೀರ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು.