ಸೊಲ್ಲಾಪುರ : ಕರ್ನಾಟಕದಿಂದ ಶಿರಡಿ ಸಾಯಿಬಾಬಾ ದರ್ಶನಕ್ಕೆ ತೆರಳುತ್ತಿದ್ದ ಭಕ್ತರ ವಾಹನ ಅಪಘಾತಕ್ಕೀಡಾಗಿ, ನಾಲ್ವರು ದುರ್ಮರಣ ಹೊಂದಿದ್ದ ಘಟನೆ ಬುಧವಾರ ಮುಂಜಾನೆ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಕರ್ಮಲಾ ತಾಲೂಕಿನ ಪಾಂಡೆ ಗ್ರಾಮದ ಬಳಿ ಸಂಭವಿಸಿದೆ.
ಅದೃಷ್ಟವಶಾತ್ ಅಪಘಾತದಲ್ಲಿ 8 ತಿಂಗಳ ಮಗು ಬದುಕುಳಿದಿದೆ. ಕಲಬುರಗಿಯ ಶ್ರೀಶೈಲ ಚಂಡೇಶ ಕುಂಬಾರ (56) ಶಶಿಕಲಾ ಶ್ರೀಶೈಲ್ ಕುಂಬಾರ (50) ಬಾಗಲಕೋಟೆಯ ಜ್ಯೋತಿ ದೀಪಕ್ ಹಿರೇಮಠ (38) ಸ್ಥಳದಲ್ಲೇ ಮೃತಪಟ್ಟರೆ, ಹುಬ್ಬಳ್ಳಿಯ ಶಾರದಾ ದೀಪಕ್ ಹಿರೇಮಠ (70) ತೀವ್ರವಾಗಿ ಗಾಯಗೊಂಡು ಕರ್ಮಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅಸುನೀಗಿದ್ದಾರೆ.ಪೊಲೀಸ್ ಮೂಲಗಳ ಪ್ರಕಾರ, ಕರ್ನಾಟಕದ ಕಲಬುರಗಿಯಿಂದ 8 ಮಂದಿ ಭಕ್ತರು ಶಿರಡಿ ಸಾಯಿಬಾಬಾ ದರ್ಶನಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ, ಕರ್ಮಲ ತಾಲೂಕಿನ ಪಾಂಡೆ ಗ್ರಾಮದ ಬಳಿ ಕಾರು ತೆರಳುತ್ತಿದ್ದಾಗ ಎದುರಿಗೆ ಬಂದ ಕಂಟೈನರ್ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಬೆಳ್ಳಂಬೆಳಗ್ಗೆ ನಡೆದ ಅಪಘಾತದ ದೊಡ್ಡ ಸದ್ದ ಕೇಳಿದ ಗ್ರಾಮದ ಕೆಲವರು ಸ್ಥಳಕ್ಕೆ ಧಾವಿಸಿ ಬಂದು ಕಾರಿನಲ್ಲಿ ಸಿಕ್ಕಿದ್ದವರನ್ನು ಹೊರತೆಗೆದಿದ್ದಾರೆ. ತಕ್ಷಣವೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಢ ನಿದ್ದೆಯಲ್ಲಿದ್ದ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ಪೈಕಿ ತೀವ್ರ ಗಾಯಗೊಂಡಿದ್ದ ಶಾರದಾ ದೀಪಕ್ ಎಂಬುವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡುವಾಗ ಮೃತಪಟ್ಟಿದ್ದಾರೆ.8 ಮಂದಿಯ ಪೈಕಿ ನಾಲ್ವರು ಸಾವಿಗೀಡಾದರೆ, 8 ತಿಂಗಳ ಹಸುಗೂಸು ಭೀಕರ ಅಪಘಾತದಲ್ಲಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ. ಎಲ್ಲ ಗಾಯಾಳುಗಳನ್ನು ಕರ್ಮಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತದ ನಂತರ ಕಂಟೈನರ್ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.