ಸಕಲೇಶಪುರ:ಸಕಲೇಶಪುರದ ದೊಡ್ಡತಪ್ಪಲುವಿನ ಬಳಿಯ ಶಿರಾಡಿ ಘಾಟ್‌ನಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.ಎತ್ತಿನಹೊಳೆ ಯೋಜನೆಯ ಅವೈಜ್ಞಾನಿಕ ಕಾಮಗಾರಿಯಿಂದ ಗುಡ್ಡ ಕುಸಿತವಾಗಿದೆ ಎನ್ನಲಾಗಿದೆ.
ರಾಜ್ಯಾದ್ಯಂತ ನಿರಂತರ ಭಾರೀ ಮಳೆಯಾಗುತ್ತಿದ್ದು, ವಿವಿಧ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸುತ್ತಿದೆ. ಶಿರಾಡಿ ಘಾಟ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್) 75ರಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಸಕಲೇಶಪುರ ತಾಲೂಕಿನ ಎತ್ತಿನಹಳ್ಳಿ ಬಳಿ ದಿಢೀರ್ ಭೂಕುಸಿತ ಉಂಟಾಗಿ ವಾಹನಗಳು ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ನಿಂತಿವೆ.
ಇಂದು ಸಕಲೇಶಪುರ ತಾಲೂಕಿನ ದೊಡ್ಡತಪ್ಪಲುವಿನ ಬಳಿ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ವಿಭಾಗದಲ್ಲಿ ಸಂಚರಿಸುತ್ತಿದ್ದ ಕಾರು, ಲಾರಿ, ಗ್ಯಾಸ್ ಟ್ಯಾಂಕರ್ ಮೇಲೆ ಗುಡ್ಡ ಕುಸಿದಿದೆ. ಆದರೆ, ಭೂಕುಸಿತದಿಂದಾಗಿ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರವನ್ನು ಮತ್ತೆ ಸ್ಥಗಿತಗೊಳಿಸಲಾಗಿದೆ. ಗಂಟೆಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ರಸ್ತೆ ತಡೆ ಉಂಟಾಗಿದೆ.
ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಸುಮಾರು ಆರು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಳ್ಳುವ ನಿರೀಕ್ಷೆಯಿದೆ. ಅದೇ ರೀತಿ ಪುತ್ತೂರು-ಸಂಪಾಜೆ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿರುವುದರಿಂದ ಮೂರು ಗಂಟೆಗಳ ಕಾಲ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.