ಕಾರವಾರ: ಅಂಕೋಲಾ ಶಿರೂರು ಬಳಿ ಹೆದ್ದಾರಿಯಲ್ಲಿ ಭಾರಿ ಗುಡ್ಡ ಕುಸಿದು ಹತ್ತು ಮಂದಿ ನಾಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಸ್ಥಳದಲ್ಲಿ 6 ಮಂದಿಯ ಮೃತದೇಹಗಳು ಪತ್ತೆಯಾಗಿವೆ.
ಇಂದು ಮುಂಜಾನೆಯಿಂದ ಮತ್ತೆ ಮೃತದೇಹಗಳ ಪತ್ತೆ ಕಾರ್ಯಾಚರಣೆಯನ್ನು ಎರಡು ಹಿಟಾಚಿ, ಎರಡು ಜೆಸಿಬಿ ಯಂತ್ರಗಳ ಮೂಲಕ ಆರಂಭಿಸಲಾಗಿದೆ. ಮಣ್ಣಿನ ಅಡಿ 10 ಮಂದಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿತ್ತು. ಈಗಾಗಲೇ 6 ಮಂದಿಯ ಮೃತದೇಹವನ್ನು ಪತ್ತೆ ಮಾಡಲಾಗಿದ್ದು, ಇನ್ನುಳಿದವರ ಮೈತದೇಹಗಳಿಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ನಿನ್ನೆ ಮಹಿಳೆಯೊಬ್ಬರ ಮೃತದೇಹ ಪತ್ತೆಯಾತಗಿತ್ತು. ನಿನ್ನೆ ಕತ್ತಲಾದ್ದರಿಂದ ಹಾಗೂ ಮಳೆಯ ಕಾರಣ ಕಾರ್ಯಾಚರಣೆ ನಿಲ್ಲಿಸಲಾಗಿತ್ತು.
ಭಾರಿ ಪ್ರಮಾಣದಲ್ಲಿ ಗುಡ್ಡದ ಮಣ್ಣು ಹೆದ್ದಾರಿಗೆ ಕುಸಿದಿರುವುದರಿಂದ ಈ ದುರ್ಘಟನೆ ನಡೆದಿದೆ. ಮಣ್ಣು ತೆರವು ಕಾರ್ಯಾಚರಣೆಗೆ ಹತ್ತಾರು ಲಾರಿಗಳನ್ನು ಬಳಸಲಾಗುತ್ತಿದೆ. ರಕ್ಷಣಾ ಕಾರ್ಯದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸ್, ಎನ್‌ಡಿಆರ್‌ಎಫ್ ತಂಡ ಪಾಲ್ಗೊಂಡಿದೆ.
ಭೂಕುಸಿತ ಪ್ರದೇಶದಲ್ಲೇ ಸಡಿಲಗೊಂಡಿರುವ ಗುಡ್ಡ ಮತ್ತೆ ಬಿರುಕು ಬಿಟ್ಟಿದೆ. ಹೀಗಾಗಿ ಯಾವುದೇ ಕ್ಷಣದಲ್ಲೂ ಮತ್ತೆ ಕುಸಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಗುಡ್ಡದ ಮದ್ಯ ಭಾಗದಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ರಸ್ತೆಯ ಪಕ್ಕದಲ್ಲಿರುವ ಹೊಳೆಗೆ ಮಣ್ಣು ಕೊಚ್ಚಿ ಹೋಗುತ್ತಿದೆ. ಇದರಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗುತ್ತಿದೆ. ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯು ಈ ಅವಘಡಕ್ಕೆ ಕಾರಣವಾಗಿದ್ದು, ಇನ್ನಷ್ಟು ಜನರನ್ನು ಬಲಿ ಪಡೆಯುವ ಭೀತಿ ಎದುರಾಗಿದೆ.