ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದ ಅಪ್ರಾಪ್ತೆಗೆ ಆಕೆಯ ಚಿಕ್ಕಪ್ಪನೇ ಪ್ರಕರಣದಿಂದ ಹಿಂದೆ ಸರಿಯಲು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದ್ದು, ಇದೀಗ ಆತನ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮಕ್ಕಳ ಕಲ್ಯಾಣ ಸಮಿತಿ ಶಿಫಾರಸ್ಸು ಮಾಡಿದೆ.
ತನ್ನ ತಂದೆಯ ಅನಾರೋಗ್ಯದ ಕಾರಣಕ್ಕೆ 17 ವರ್ಷದ ಅಪ್ರಾಪ್ತೆ ಚಿಕ್ಕಪ್ಪನ ಆಶ್ರಯದಲ್ಲಿದ್ದು, ಈ ಸಂದರ್ಭದಲ್ಲಿ ಪ್ರಕರಣದಿಂದ ಹಿಂದೆ ಸರಿಯುವಂತೆ ಆತ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಅಲ್ಲದೆ ಬಾಲಕಿಗೆ ಹಣ, ಚಿನ್ನಾಭರಣ ನೀಡುವ ಆಮಿಷವನ್ನೂ ಒಡ್ಡಲಾಗಿತ್ತು ಎಂದು ಹೇಳಲಾಗಿದೆ.
ಈ ಹಿನ್ನಲೆಯಲ್ಲಿ ಮೇ 22 ರಂದು ಮನೆ ತೊರೆದಿದ್ದ ಬಾಲಕಿ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಗೆ ತೆರಳಿ ಅಲ್ಲಿನ ನಿರ್ದೇಶಕ ಸ್ಟ್ಯಾನ್ಲಿ ಅವರ ಬಳಿ ತನ್ನ ಸಂಕಷ್ಟ ಹೇಳಿಕೊಂಡಿದ್ದರು. ಬಳಿಕ ಮಂಗಳವಾರದಂದು ಸ್ಟ್ಯಾನ್ಲಿ ಅವರ ಜೊತೆ ಚಿತ್ರದುರ್ಗಕ್ಕೆ ಬಂದಿದ್ದ ಬಾಲಕಿ ಮಕ್ಕಳ ಕಲ್ಯಾಣ ಸಮಿತಿ ಬಳಿ ತನ್ನ ಅಳಲು ತೋಡಿಕೊಂಡಿದ್ದು ಇದೀಗ ಬಾಲಕಿಯ ಚಿಕ್ಕಪ್ಪನ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸಮಿತಿ, ಮಕ್ಕಳ ರಕ್ಷಣಾಧಿಕಾರಿಗೆ ಆದೇಶಿಸಿದೆ.