ಶಿವಮೊಗ್ಗ : ಶಿವಮೊಗ್ಗದಲ್ಲಿ ಪದೇ ಪದೇ ಗಲಾಟೆಗಳು ನಡೆಯುತ್ತಿದ್ದು, ಇದರ ತಾಯಿ ಬೇರು ಹುಡುಕುವ ಅವಶ್ಯಕತೆ ಇದೆ. ಈ ಬಗ್ಗೆ ರಾಜಕೀಯ ವ್ಯಕ್ತಿಗಳು ಕೂಡ ವಿಮರ್ಶೆ ಮಾಡಿಕೊಳ್ಳಬೇಕು ಎಂದು ಅವಧೂತ ವಿನಯ್ ಗುರೂಜಿ ಹೇಳಿದ್ದಾರೆ. ಶಿವಮೊಗ್ಗದಲ್ಲಿ ರಾಗಿಗುಡ್ಡ ಗಲಭೆಗೆ ಸಂಬಂಧಿಸಿದಂತೆ ಶಾಂತಿ ಸಭೆ ನಡೆಸಿ, ಗಾಂಧೀಜಿ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದ್ದಾರೆ. ಶಿವಮೊಗ್ಗದಲ್ಲಿ ಗಲಭೆಗಳು ನಡೆಯುತ್ತಿದ್ದು, ಎಲ್ಲಾ ಗಲಭೆಗಳಲ್ಲೂ 15 ರಿಂದ 30 ವರ್ಷದ ಯುವಕರಷ್ಟೇ ಕಾಣುತ್ತಿದ್ದಾರೆ. ಇದರಲ್ಲಿ ಯಾರು ಕೂಡ ಶ್ರೀಮಂತರ ಮಕ್ಕಳು ಕಾಣುತ್ತಿಲ್ಲ. ಶಿವಮೊಗ್ಗದಲ್ಲಿ ಯಾವುದೋ ಒಂದು ವರ್ಗ ನಿಂತು ಆಟವಾಡುತ್ತಿದೆ. ಇದನ್ನು ಶಿವಮೊಗ್ಗದ ಜನರು ಅರಿಯಬೇಕಿದೆ. ತಂದೆ, ತಾಯಿಗಳು ತಮ್ಮ ಮಕ್ಕಳಿಗೆ ತಿದ್ದುವ ಕೆಲಸವಾಗಬೇಕಿದೆ. ಧರ್ಮಗುರುಗಳು, ಸ್ವಾಮೀಜಿಗಳು ಎಷ್ಟು ಹೇಳಲು ಸಾಧ್ಯ. ಕಾನೂನು ಕಠಿಣಗೊಳಿಸುವ ಅಗತ್ಯವಿದ್ದು, ಮುಲಾಜಿಲ್ಲದೇ, ಕೊರೊನಾ ಬಂದಾಗ ದೂರವಿಟ್ಟ ಹಾಗೆ ಮಕ್ಕಳನ್ನು ಸರಿ ದಾರಿಗೆ ತರಲು ದೂರವಿಟ್ಟು ಸರಿದಾರಿಗೆ ತರಬೇಕಿದೆ ಎಂದು ಹೇಳಿದ್ದಾರೆ. ಯುವಕರು ಧರ್ಮಗುರುಗಳು ಹೇಳಿದ್ದನ್ನು ಕೇಳದೆ ಇರುವುದು ದುರಂತವಾಗಿದೆ ಎಂದು ವಿನಯ್ ಗುರೂಜಿ ಬೇಸರ ವ್ಯಕ್ತಪಡಿಸಿದ್ದಾರೆ.