ಶಿವಮೊಗ್ಗ : ಶಿವಮೊಗ್ಗದಲ್ಲಿ ಇಂದು ಕೇಂದ್ರ ಸರ್ಕಾರ ನೀಡಿದ ರಸಗೊಬ್ಬರ ಹಾಗೂ ಯೂರಿಯಾವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ರೈತರಿಗೆ ವಂಚಿಸಿದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧದ ಬೃಹತ್ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಭಾಗವಹಿಸಿದ್ದರು.
ಜಿಲ್ಲೆಯ ಬಗರ್ ಹುಕುಂ ಸಾಗುವಳಿದಾರರಿಗೆ ನಿರಂತರ ಕಿರುಕುಳ ನೀಡುತ್ತಾ, ಒಂದೇ ಒಂದು ರೈತಪರ ಯೋಜನೆ ಜಾರಿಗೊಳಿಸದೆ ತಾತ್ಸಾರ ಧೋರಣೆ ತಾಳಿರುವ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಲಾಯಿತು.
ರೈತ ವಿರೋಧಿ ನೀತಿ ಖಂಡಿಸಿ ಬೃಹತ್ ಪ್ರತಿಭಟನೆ
ಶಿವಮೊಗ್ಗ ನಗರದ ಗೋಪಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಶಿವಮೊಗ್ಗ ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಈ ಬೃಹತ್ ಪ್ರತಿಭಟನೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ, ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ, ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ನವೀನ್ ಅವರು ಪ್ರತಿಭಟನೆ ಮೆರವಣಿಗೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.