ಬೆಳಗಾವಿ: ನಮ್ಮ ಸರಕಾರದಲ್ಲಿ ಕೋಮು ಗಲಭೆ ಮಾಡಿದವರ ಮೇಲೆ ಯಾವುದೇ ಮುಲ್ಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಶೆಫರ್ಡ್ ಇಂಡಿಯಾ ರಾಷ್ಟ್ರೀಯ 9 ನೇ ಬೃಹತ್ ಮಹಾ ಸಮಾವೇಶ ತೆರಳುವ ಮೊದಲು ಬೆಳಗಾವಿ ವಿಮಾನ ಸಾಂಬ್ರಾ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನಡೆದ ಕೋಮು ಗಲಭೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಗಲಭೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಕೋಲಾರದಲ್ಲಿ ಬಿಜೆಪಿ ಪ್ರತಿಭಟನೆ ಮಾಡಿದರೆ ಮಾಡಲಿ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ. ಅದು ಶಾಂತಿಯುತವಾಗಿ ಮಾಡಲಿ ಎಂದರು. ನಮ್ಮ ಸರಕಾರದಲ್ಲಿ ಯಾವ ಸಮುದಾಯದವರಿಗೂ ಅನ್ಯಾಯವಾಗಿಲ್ಲ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿದ್ದಾರೆ. ಆದರೆ ನಾವು ಎಲ್ಲ ಸಮುದಾಯದವರಿಗೆ ನ್ಯಾಯ ದೊರಕಿಸಿಕೊಟ್ಟಿದ್ದೇವೆ ಎಂದರು. ಬೆಳಗಾವಿ ಜಿಲ್ಲೆ ವಿಭಜನೆ ಮಾಡುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ಚರ್ಚೆ ಮಾಡೋಣ ಎಂದರು.