ಶಿವಮೊಗ್ಗ: ಅಕ್ಟೋಬರ್ 17 ರಿಂದ 30 ದಿನಗಳ ಕಾಲ ಶಿವಮೊಗ್ಗಕ್ಕೆ ಭೇಟಿ ನೀಡದಂತೆ ಪ್ರಮೋದ್ ಮುತಾಲಿಕ್ ಅವರಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.
ಪ್ರಮೋದ್ ಮುತಾಲಿಕ್ ಅ.17ರ ರಾತ್ರಿ ಮಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟ್ಟಿದ್ದರು. ಆದರೆ ದಾರಿ ಮಧ್ಯೆ ಪೊಲೀಸರು ತಡೆದು, ನಿರ್ಬಂಧಿಸಿದ ನೋಟಿಸ್ ನೀಡಿದರು.
ಈ ಕುರಿತು ಮಾತನಾಡಿದ ಪ್ರಮೋದ ಮುತಾಲಿಕ್, ಇತ್ತೀಚೆಗೆ ಗಲಾಟೆ ನಡೆದ ಶಿವಮೊಗ್ಗದ ರಾಗಿಗುಡ್ಡ ಭೇಟಿ ನೀಡಲು ಮಂಗಳೂರಿನಿಂದ ಹೊರಟ್ಟಿದ್ದೆ. ಆದರೆ ಪೊಲೀಸರು ಮಾಸ್ತಿಕಟ್ಟೆ ಬಳಿ ತಡೆದು, ನನ್ನನ್ನು ವಶಕ್ಕೆ ಪಡೆದುಕೊಂಡು ದಾವಣಗೆರೆಗೆ ತಂದು ಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ನನ್ನ ಭೇಟಿಗೆ ನಿರ್ಬಂಧ ವಿಧಿಸಿರುವ ಬಗ್ಗೆ ಕೋರ್ಟ್ ಮೊರೆ ಹೋಗುತ್ತೇನೆ. ರಾಗಿಗುಡ್ಡದ ಸಂತ್ರಸ್ತ ಹಿಂದುಗಳಿಗೆ ಸಾಂತ್ವನ ಹೇಳುವುದು ನನ್ನ ಉದ್ದೇಶ. ಆದರೆ ನನ್ನನ್ನು ತಡೆದು ಪೊಲೀಸರು ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ.