ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಹಿಂದೂಗಳ ಮನೆ ಮೇಲೆ ದಾಳಿ ನಡೆದಿರುವುದು ಪೂರ್ವ ನಿಯೋಜಿತ ಕೃತ್ಯವಾಗಿದೆ. ಕಾಂಗ್ರೆಸ್ ಪಕ್ಷ ಭಯೋತ್ಪಾದನಾ ಕೃತ್ಯಕ್ಕೆ ಬೆಂಬಲಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಇಂದು ಬಿಜೆಪಿ ಸತ್ಯ ಶೋಧನಾ ಸಮಿತಿ ತಂಡ ಗಲಭೆ ಉಂಟಾಗಿದ್ದ ರಾಗಿಗುಡ್ಡ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಘಟನೆ ಕುರಿತು ಮಾಹಿತಿ ಪಡೆಯಿತು. ಬಳಿಕ ಪತ್ರಿಕಾಗೋಷ್ಠಿ ನಡೆಸಿದ ನಳೀನ್ ಕುಮಾರ್ ಕಟೀಲ್, ಅಂದು 2 ಗಂಟೆಗಳ ಕಾಲ ಕಲ್ಲು ತೂರಾಟ ನಡೆದಿದೆ. ನಾನು ಇಂದು ಪ್ರತ್ಯಕ್ಷದರ್ಶಿಗಳ ಹಾಗೂ ಗಾಯಾಳುಗಳಿಗೆ ಭೇಟಿ ಮಾಡಿ ಚರ್ಚಿಸಿದ್ದೇನೆ. ರಾಗಿಗುಡ್ಡದ ಜನರು ನನಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಭಯೋತ್ಪಾದನಾ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡಿಕೊಂಡು ಬಂದಿದ್ದು, ರಾಗಿಗುಡ್ಡ ಪ್ರಕರಣವು ಕೂಡ ಭಯೋತ್ಪಾದನಾ ಕೃತ್ಯದ ಒಂದು ಭಾಗವಾಗಿದೆ ಎಂದು ನಳೀನ್ ಕುಮಾರ ಕಟೀಲು ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಸಿದ್ಧರಾಮಯ್ಯ ಅಧಿಕಾರ ವಹಿಸಿಕೊಂಡ ಬಳಿಕ ಅನೇಕ ಈ ರೀತಿಯ ಘಟನೆಗಳು ನಡೆದಿವೆ. ಇವೆಲ್ಲವನ್ನೂ ತನಿಖೆಗೆ ಒಳಪಡಿಸಬೇಕು. ರಾಗಿಗುಡ್ಡ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತೇನೆ ಎಂದಿದ್ದಾರೆ. ಇದೆ ರಾಗಿಗುಡ್ಡದಲ್ಲಿ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಗಳು ನಡೆದಿವೆ. ಅವೆಲ್ಲವೂ ಶಾಂತಿಯುತವಾಗಿ ನಡೆದಿವೆ. ಆದರೆ ಈದ್ ಮಿಲಾದ್ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ. ಸರ್ಕಾರ ಹಾಗೂ ಪೊಲೀಸರ ವೈಫಲ್ಯದಿಂದಾಗಿಯೇ ಈ ಕೃತ್ಯ ನಡೆದಿದೆ ಎಂದು ಆರೋಪಿಸಿದ್ದಾರೆ. ಮೆರವಣಿಗೆ ಇದೆ ಎಂದು ಪೊಲೀಸರ ಪರ್ಮಿಷನ್ ತೆಗೆದುಕೊಳ್ಳಬೇಕಿತ್ತು. ಆದರೆ ಅದು ಆಗಿಲ್ಲ. ಗಲಭೆ ವೇಳೆ ಪೊಲೀಸರು, ಎಸ್‌ಪಿ ಮೇಲೆ ದಾಳಿಯಾಗುತ್ತದೆ. ಪೊಲೀಸರ ಮೇಲೆಯೇ ದಾಳಿ ನಡೆದರೆ ಹೇಗೆ.? ಸಾಮಾನ್ಯ ಜನರ ರಕ್ಷಣೆ ಯಾರು ಕೊಡ್ತಾರೆ ಎಂಬುದೇ ಪ್ರಶ್ನೆ ಮಾಡಿದ್ದು, ಇಲ್ಲಿ ಟಾರ್ಗೆಟ್ ಮಾಡಿ ಕಲ್ಲು ತೂರಾಟ ನಡೆಸಲಾಗಿದೆ. ಗಣೇಶೋತ್ಸವದಲ್ಲಿ ಭಾಗಿಯಾಗಿದ್ದ ಯುವಕರು, ಹಾಗೂ ಮಹಿಳೆಯರ ಮೇಲೆ ಟಾರ್ಗೆಟ್ ಮಾಡಲಾಗಿದೆ. ಅವರ ಮನೆಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲಾಗಿದೆ. ಹಲ್ಲೆ ಕೇವಲ ಹಿಂದೂಗಳ ಮನೆಗಳ ಮೇಲೆ ನಡೆದಿದೆ. ಯಾವ ಮುಸಲ್ಮಾನರ ಮನೆ ಮೇಲೂ ನಡೆದಿಲ್ಲ. ಮಹಿಳೆಯರು, ಮಕ್ಕಳು, ಬಾಣಂತಿಯರು ನೋಡದೇ ಹಲ್ಲೆ ಮಾಡಲಾಗಿದೆ. ಏಟು ತಿಂದವರನ್ನು ಜೈಲಿಗೆ ಕಳಿಸುವ ಕೆಲಸ ಮಾಡಲಾಗಿದೆ ಎಂದು ಕಟೀಲು ದೂರಿದ್ದಾರೆ. ಇನ್ನು ಕೆ.ಎಫ್.ಡಿ. ಹಾಗೂ ಎಸ್.ಡಿ.ಪಿ.ಐ.ಗೆ ಜಮೀರ್ ಅಹ್ಮದ್ ಸಹಕಾರ ನೀಡುತ್ತಿದ್ದಾರೆ. ಜಮೀರ್ ಗೆ ಸಿದ್ಧರಾಮಯ್ಯ ಸಾಥ್ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಎಂದರೆ, ಕಾಂಗ್ರೆಸ್. ಈ ಕಾಂಗ್ರೆಸ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಬೆಂಗಳೂರಿನಲ್ಲಿ ನಡೆದ ಘಟನೆಯಲ್ಲಿ ಯಾರ ಪಾತ್ರವಿತ್ತು ಎಂದು ಕಟೀಲು ಪ್ರಶ್ನಿಸಿದ್ದಾರೆ.