ಬೆಂಗಳೂರು : ಶೀಘ್ರವೇ 4180 ಅಂಗನವಾಡಿ ಕಾರ್ಯಕರ್ತೆ, 9411 ಸಹಾಯಕಿಯರ ಹುದ್ದೆಗಳ ನೇಮಕಾತಿ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಉಸ್ತುವಾರಿ ಕಾರ್ಯದರ್ಶಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಂಗನವಾಡಿ ಕಾರ್ಯಕರ್ತೆಯರ 4180 ಹುದ್ದೆಗಳು ಹಾಗೂ ಸಹಾಯಕಿಯರ 9411 ಹುದ್ದೆಗಳು ಖಾಲಿಯಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಡಿಸೆಂಬರ್ ಅಂತ್ಯದ ಒಳಗಾಗಿ ಪೂರ್ಣಗೊಳಿಸಬೇಕು. ನಗರ ಪ್ರದೇಶದಲ್ಲಿ ಸಹಾಯಕಿಯರ ಹುದ್ದೆಯ ಗೌರವಧನ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಿಎಂ ಸೂಚನೆ ನೀಡಿದರು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅಡಿ ಹೆಚ್ಚಿನ ಅನುದಾನ ಪಡೆಯಲು ಪ್ರಯತ್ನಿಸಬೇಕು ಎಂದರು.
ಬಜೆಟ್ನಲ್ಲಿ ಘೋಷಿಸಿರುವಂತೆ 2 ಸಾವಿರ ಪಂಚಾಯತ್ ವ್ಯಾಪ್ತಿಯಲ್ಲಿ ಮಾದರಿ ಶಾಲೆಗಳನ್ನು ಸಿಎಸ್ಆರ್ ಅಡಿಯಲ್ಲಿ ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆ ಆರಂಭಿಸಲಾಗಿದೆ. ಇದಕ್ಕಾಗಿ ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ರಾಜ್ಯದಲ್ಲಿ ಖಾಸಗಿ ಕಂಪೆನಿಗಳು ಕಾಯ್ದೆ ಪ್ರಕಾರ ಕಳೆದ ಸಾಲಿನಲ್ಲಿ 8163 ಕೋಟಿ ಕಡ್ಡಾಯವಾಗಿ ಸಿಎಸ್ಆರ್ ಅಡಿ ವೆಚ್ಚ ಮಾಡಬೇಕಾಗಿತ್ತು. ಖಾಸಗಿ ಕಂಪೆನಿಗಳು ಈ ಅವಧಿಯಲ್ಲಿ 4 ಲಕ್ಷ ಕೋಟಿ ರೂ. ಲಾಭ ಗಳಿಸಿವೆ. 1190 ಕೋಟಿ ಕಳೆದ ವರ್ಷ ಸಿಎಸ್ಆರ್ ಅಡಿ ವೆಚ್ಚ ಮಾಡಿದ್ದು, ಶೇ.30ರಷ್ಟು ಮಾತ್ರ ಸಿಎಸ್ಆರ್ ಅಡಿ ಬಳಸುತ್ತಿವೆ ಎಂದರು.
ರಾಜ್ಯದಲ್ಲಿ ಈಗಾಗಲೇ 500 ಸ್ಥಳಗಳನ್ನು ಗುರುತಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ 2ಸಾವಿರ ಶಾಲೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಪ್ರಮುಖ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಳ್ಳಲು ಸೂಚನೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.