ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅಗ್ನಿ ಪಥದ ಅನ್ವಯ ತರಭೇತಿ ಪಡೆಯುತ್ತಿರುವ ಅಗ್ನಿವೀರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 4 ವರ್ಷ ಸೇವೆ ಪೂರೈಸಿದ ಶೇ. 50 ರಷ್ಟು ಮಂದಿಯ ಕಾಯಂ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಮುಂದಿನ ದಿನದಲ್ಲಿ ಸಂಭಾವ್ಯ ಸಿಬ್ಬಂದಿ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಈ ಬದಲಾವಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಶೇ.50ರಷ್ಟು ಅಗ್ನಿವೀರ ಸಿಬ್ಬಂದಿಯನ್ನು ಶಾಶ್ವತ ನೇಮಕಾತಿ ಮಾಡುವ ಸಂಬಂಧ ಚಿಂತನೆ ನಡೆಸಲಾಗಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೂನ್ 14, 2022 ರಂದು, ಸಶಸ್ತ್ರ ಪಡೆಗಳಲ್ಲಿ ಸೈನಿಕರ ನೇಮಕಾತಿಗಾಗಿ ಸರ್ಕಾರವು ಅಗ್ನಿಪಥ್ ಯೋಜನೆಯನ್ನು ನಾಲ್ಕು ವರ್ಷಗಳವರೆಗೆ ಘೋಷಿಸಿತು ಮತ್ತು ವಯಸ್ಸಿನ ಮಿತಿಯನ್ನು 17.5 ರಿಂದ 21 ವರ್ಷಗಳಿಗೆ ನಿಗದಿಪಡಿಸಲಾಗಿದ್ದು, ಇದೀಗ 23 ವರ್ಷಕ್ಕೆ ಹೆಚ್ಚಿಸಲು ಚಿಂತನೆ ನಡೆಸಿದೆ.
2026ರ ವೇಳೆಗೆ ಒಟ್ಟು 1.75 ಲಕ್ಷ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲಾಗುವುದು. ಅಗ್ನಿವೀರ್ ನೇಮಕಾತಿ ಅಡಿಯಲ್ಲಿ ಪ್ರಸ್ತುತ ನಿಯಮದ ಪ್ರಕಾರ, ಕೇವಲ 25 ಪ್ರತಿಶತದಷ್ಟು ಅಗ್ನಿವೀರ ಸಿಬ್ಬಂದಿಯನ್ನು ಮಾತ್ರ ಖಾಯಂ ಮಾಡಬೇಕು ಎಂಬುದಾಗಿತ್ತು. ಇದರ ಮಿತಿಯನ್ನು ಶೇಕಡಾ 50 ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.