ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯಲ್ಲಿ ಹರಿಯುವ ಎಲ್ಲಾ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ರಸ್ತೆಗಳು ಹಾಗೂ ಸೇತುವೆಗಳು ಜಲಾವೃತಗೊಂಡಿದೆ. ಇಂತಹ ಸಮಯದಲ್ಲಿ ದಕ್ಷಿಣ ಕನ್ನಡದ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತಾಧಿಗಳು ಕೆಲವು ವಿಚಾರಗಳನ್ನು ಗಮನಿಸಬೇಕಿದೆ.
ಈ ವಾರಾಂತ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕುಕ್ಕೆ ಶ್ರೀ ಸುಬ್ರಮಣ್ಯ ದೇವಾಲಯ ಸೇರಿದಂತೆ ಕರಾವಳಿಯ ವಿವಿಧ ದೇವಾಲಯಗಳಿಗೆ ಭೇಟಿ ನೀಡಬೇಕು ಎಂದುಕೊಂಡಿರುವ ಭಕ್ತರು ತಮ್ಮ ಯೋಜನೆಯನ್ನು ಮುಂದಕ್ಕೆ ಹಾಕುವುದು ಸೂಕ್ತವಾಗಿದೆ.
ಭಾರೀ ಮಳೆಯಿಂದ ಭೂ ಕುಸಿತದ ಪರಿಣಾಮವಾಗಿ ಸಕಲೇಶಪುರದಲ್ಲಿ ಶಿರಾಡಿ ಘಾಟ್ ಹೆದ್ದಾರಿ ಬಂದ್ ಮಾಡಲಾಗಿದ್ದು, ಚಿಕ್ಕಮಗಳೂರಿನಲ್ಲಿ ಕಾರ್ಕಳ-ಶೃಂಗೇರಿ ಹೆದ್ದಾರಿಯನ್ನು ಕೂಡ ಬಂದ್ ಮಾಡಲಾಗಿದೆ. ಇನ್ನು ಬೆಂಗಳೂರು ಹಾಗೂ ಇತರ ಘಟ್ಟದ ಮೇಲಿನ ಜಿಲ್ಲೆಯಿಂದ ಕರಾವಳಿ ಜಿಲ್ಲೆಗಳಿಗೆ ತೆರಳಲು ಚಾರ್ಮಾಡಿ ಘಾಟ್ ಒಂದೇ ಮಾರ್ಗವಾಗಿದ್ದು ಭಾರೀ ಸಂಚಾರ ದಟ್ಟಣೆಗೆ ಕಾರಣವಾಗಿದೆ.
ಚಾರ್ಮಾಡಿ ಘಾಟ್‌ನಲ್ಲಿಯೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಎಲ್ಲೆಡೆ ಗುಡ್ಡ ಕುಸಿತ ಕೂಡ ಉಂಟಾಗುತ್ತಿದ್ದು, ಪ್ರಯಾಣಿಕರು ಹಾಗೂ ವಾಹನ ಸವಾರರು ಅತೀವ ಎಚ್ಚರ ವಹಿಸಬೇಕಾಗಿದೆ.
ಇನ್ನು ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿಯಲ್ಲಿ ನೀರಿನ ಮಟ್ಟ ಬಹಳ ಏರಿಕೆಯಾಗಿದೆ. ಅಲ್ಲದೇ ಮಳೆ ಮುಂದುವರಿದ ಕಾರಣ ಕುಮಾರಧಾರ ನದಿ ಕೂಡ ಉಕ್ಕಿ ಹರಿಯುತ್ತಿದೆ. ಹೀಗಾಗಿ ಈ ಸಮಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕುಕ್ಕೆ ಶ್ರೀ ಸುಬ್ರಮಣ್ಯ ದೇವಾಲಯಕ್ಕೆ ಭೇಟಿ ನೀಡಬೇಕು ಎಂದುಕೊಂಡಿರುವ ಭಕ್ತರು ತಮ್ಮ ಯೋಜನೆಯನ್ನು ಬದಲಿಸುವುದು ಉತ್ತಮವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರಿಂದ ವಿಶೇಷ ಸೂಚನೆ
ರಾಷ್ಟ್ರೀಯ ಹೆದ್ದಾರಿ – 275ರಲ್ಲಿ, ಸಂಪಾಜೆಯಿಂದ ಮಡಿಕೇರಿವರೆಗಿನ ಕೆಲ ಪ್ರದೇಶಗಳಲ್ಲಿ ಭೂಕುಸಿತ/ಗುಡ್ಡಕುಸಿತ ಉಂಟಾಗುವ ಸಂಭವವಿರುವುದರಿಂದ, ಮುಂಜಾಗ್ರತಾ ಕ್ರಮವಾಗಿ ಸದ್ರಿ ಮಾರ್ಗವಾಗಿ ಸಾಗುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು (ತುರ್ತು ಸೇವೆಗಳ ಮತ್ತು ಪ್ರಕೃತಿ ವಿಕೋಪ ಸಂಬಂಧಿತ ಕಾರ್ಯದ ನಿಮಿತ್ತ ಕಾರ್ಯನಿರ್ವಹಿಸುವ ಅಧಿಕಾರಿ / ಸಿಬ್ಬಂದಿಗಳು ಸಂಚರಿಸುವ ವಾಹನಗಳನ್ನು ಹೊರತುಪಡಿಸಿ) ದಿನಾಂಕ 18.07.2024 ರಿಂದ 22.07.2024ರ ವರೆಗೆ, ಪ್ರತಿ ದಿನ ರಾತ್ರಿ 8.00 ಗಂಟೆಯಿಂದ ಮರುದಿನ ಬೆಳಗ್ಗೆ 6.00 ಗಂಟೆಯವರೆಗೆ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಮುಖಾಂತರ, ಮೈಸೂರು, ಬೆಂಗಳೂರು ಮುಂತಾದ ಸ್ಥಳಗಳಿಗೆ ಸಂಚರಿಸುವ ವಾಹನಗಳು, ಬದಲಿ ರಸ್ತೆಯಾದ ಚಾರ್ಮಾಡಿ ಘಾಟ್ ಕೊಟ್ಟಿಗೆಹಾರ ಮಾರ್ಗವನ್ನು ಬಳಸಬಹುದಾಗಿ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.