ಬೆಂಗಳೂರು: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾಗಿರುವ ದಿನೇಶ್ ಗುಂಡೂರಾವ್ ಅವರ ಕುಟುಂಬದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದ್ದು ಅವರನ್ನು ಯಾವುದೇ ಕ್ಷಣದಲಾದ್ರು ಅರೆಸ್ಟ್ ಮಾಡುವ ಸಾಧ್ಯತೆ ಇದೆ. 42 ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಕೋರ್ಟಿನ ಮ್ಯಾಜಿಸ್ಟ್ರೇಟ್ ಅವರು ವಾರೆಂಟ್ ಹೊರಡಿಸಿದ್ದಾರೆ.
ಇದು ಜಾಮೀನು ರಹಿತ ವಾರೆಂಟ್ ಎಂಬುದು ವಿಶೇಷ. ಸುದ್ದಿಗಾರರ ಜೊತೆಗೆ ಮಾತನಾಡುವಾಗ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ಅವರನ್ನು ಟೀಕಿಸಿದ್ದರು. ಸಚಿವರ ಮನೆಯಲ್ಲಿಯೇ ಅರ್ಧ ಪಾಕಿಸ್ತಾನ ಇದೆ ಎಂದು ಗುಡಗುದಿದ್ದರು. ಇದೇ ವಿಚಾರ ಇದೀಗ ಮುಳುವಾಗಿದೆ. ದಿನೇಶ್ ಗುಂಡುರಾವ್ ಅವರ ಪತ್ನಿ ಮುಸ್ಲಿಂ ಆಗಿದ್ದರಿಂದ ಈ ರೀತಿ ಹೇಳಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರ ಹೇಳಿಕೆಯನ್ನು ಖಂಡಿಸಿರುವ ಟಬು ರಾವ್ ಅವರು, ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಅರ್ಜಿ ವಿಚಾರಣೆಯನ್ನು ನ್ಯಾಯಾಲಯವು ಬುಧವಾರ ನಡೆಸಿತು. ಈ ಪ್ರಕರಣಕ್ಕೆ ತಡೆ ನೀಡುವಂತೆ ಕೋರಿ ಹೈಕೋರ್ಟ್‌ನ ಮೆಟ್ಟಿಲೇರಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮೇಲೆ ಕೋರ್ಟ್ ಚಾಟಿ ಬೀಸಿತು.
ಪ್ರಕರಣ ತಡೆ ಮನವಿ ನಿರಾಕರಿಸಿದ ಕೋರ್ಟ್, ಬಂಧನ ವಾರೆಂಟ್ ಜಾರಿ ಮಾಡಿತು. ಜೊತೆಗೆ ಈ ಪ್ರಕರಣದ ವಿಚಾರಣೆಯನ್ನು ಇದೇ ತಿಂಗಳ ಅಕ್ಟೋಬರ್ 28ಕ್ಕೆ ಮುಂದೂಡಿತು. ಶಾಸಕರು ಹೀಗೆ ಬಹಿರಂಗಾಗಿ ಮತ್ತೊಬ್ಬ ನಾಯಕರು, ಅದರಲ್ಲೂ ಅವರ ಕುಟುಂಬದ ಮೇಲೆ ಕೀಳು ಮಟ್ಟದಲ್ಲಿ ಹೇಳಿಕೆ ನೀಡಿದ್ದನ್ನು ವಿಚಾರಣೆ ವೇಳೆ ಪ್ರಶ್ನಿಸಿದರು. ಶಾಸಕರನ್ನು ತರಾಟೆಗೆ ತೆಗೆದುಕೊಂಡರು. ಅವರ ಹೇಳಿಕೆ ನೀಡಿದ್ದನ್ನು ಪ್ರಶ್ನಿಸಿದ ನ್ಯಾಯಪೀಠಕ್ಕೆ, ಹೌದು ಎಂದು ಶಾಸಕರ ಪರ ವಕೀಲರು ಒಪ್ಪಿಕೊಂಡರು. ಇದೆಲ್ಲ ವಿಚಾರಣೆ ಆಲಿಸಿದ ನ್ಯಾಯಪೀಠವು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮನವಿ ತಿರಸ್ಕರಿಸಿ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.