ಬೆಂಗಳೂರು: ಸಂಜೆ ವೇಳೆ ಭಕ್ತಿ ಗೀತೆ ಹಾಕಿದ್ದಕ್ಕೆ ಐದಾರು ಮಂದಿ ಇದ್ದ ತಂಡವೊಂದು ಯುವಕನ ಮೇಲೆ ಮನಸೋ ಇಚ್ಚೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ನಗತರಪೇಟೆಯಲ್ಲಿ ನಡೆದಿದೆ. ಈ ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.
ಬೆಂಗಳೂರಿನ ನಗತರಪೇಟೆಯಲ್ಲಿ ಮೊಬೈಲ್ ಸ್ಪೇರ್ ಪಾರ್ಟ್ಸ್ ಅಂಗಡಿ ನಡೆಸುತ್ತಿದ್ದ ಮುಕೇಶ್ ಎಂಬುವವರ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದು, ದುಷ್ಕರ್ಮಿಗಳ ದಾಂಧಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಬಂದ ಮುಕೇಶ್, ಹಲಸೂರು ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಾಯಾಳು ಮುಕೇಶ್, ಆರು ಜನ ಬಂದಿದ್ರು, ಯಾರ್ಯಾರು ಎಂದು ಹೆಸರು ಗೊತ್ತಿಲ್ಲ. ನಾನು ಸಂಜೆ ಆರು ಗಂಟೆಗೆ ಭಜನೆ ಹಾಡು ಪ್ಲೇ ಮಾಡ್ತಾ ಇದ್ದೆ. ಆಗ ಅವರು ಬಂದು ನಮಗೆ ತೊಂದರೆ ಆಗ್ತಾ ಇದೆ ಹಾಡು ನಿಲ್ಲಿಸು ಅಂತಾ ಗಲಾಟೆ ಮಾಡಿದ್ರು. ನಂತರ ನನ್ನ ಮೇಲೆ ಹಲ್ಲೆ ಮಾಡಿದ್ರು. ಈ ಮುಂಚೆ ನನಗೆ ಅವರ ಯಾವುದೇ ಪರಿಚಯ ಇಲ್ಲ. ರೋಲ್ ಕಾಲ್ ಮಾಡೋಕೆ ಅಗಾಗ ಅಂಗಡಿಗೆ ಬರ್ತಾ ಇದ್ರು. ನಾನು ಕೊಡ್ತಾ ಇರಲಿಲ್ಲ. ಮೊಬೈಲ್ ಅಂಗಡಿ ಆದ್ದರಿಂದ ಬ್ಲೂಟೂತ್, ಹೆಡ್ ಪೋನ್ ಅಂತಾ ಬರ್ತಾ ಇದ್ರು. ನಾನು ಯಾವಾಗ್ಲೂ ಏನನ್ನೂ ಕೊಟ್ಟಿಲ್ಲ. ಇವತ್ತು ಅದೇ ರಿವೆಂಜ್ ಇಟ್ಟುಕೊಂಡು ಬಂದು ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೇ, ಅಂಗಡಿಗೆ ಏಕಾಏಕಿ ಬಂದ ಅವರು ಹಾಡು ನಿಲ್ಲಿಸು ಅಂತಾ ಗಲಾಟೆ ಮಾಡಿದ್ರು ಎಂದು ಆರೋಪಿಸಿರುವ ಮುಕೇಶ್, ಈಗ ಠಾಣೆಗೆ ಬಂದು ದೂರು ನೀಡಿದ್ದೀನಿ. ಎಲ್ಲಾ ಮಾಹಿತಿ ಮತ್ತು ಸಿಸಿಟಿವಿ ವಿಶ್ಯೂವಲ್ಸ್ ಪೊಲೀಸರಿಗೆ ಕೊಟ್ಟಿದ್ದೀನಿ. ನನಗೆ ಕನ್ನಡ ಓದೋಕೆ ಬರೊಲ್ಲ, ಎಫ್ಐಆರ್ ನಲ್ಲಿ ಏನ್ ಬರ್ದಿದಾರೆ ಗೊತ್ತಿಲ್ಲ. ಪೊಲೀಸರು ಅವರಿಗೆ ಬೇಕಾದ ಹಾಗೆ ಬರೆದಿರಬಹುದು ಅಂತಾನೂ ಅನುಮಾನ ಪಟ್ಟಿದ್ದಾರೆ.
ಮುಕೇಶ್ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ ಬೆನ್ನಲ್ಲೇ ಹಲಸೂರು ಗೇಟ್ ಪೊಲೀಸ್ ಠಾಣೆ ಮುಂದೆ ವರ್ತಕರು ಜಮಾಯಿಸಿದ್ದು, ಹಲ್ಲೆ ಮಾಡಿದ ಪುಂಡರನ್ನ ಬಂಧಿಸುವಂತೆ ಒತ್ತಾಯ ಮಾಡಿದ್ದಾರೆ. ಕಳೆದ 15 ದಿನಗಳಿಂದಲೂ ಅಂಗಡಿ ಮುಂದೆ ಬಂದು ಕಿರುಕುಳ ನೀಡುತ್ತಿದ್ದ ಆರೋಪ ಪುಂಡರ ಮೇಲೆ ಕೇಳಿ ಬಂದಿದ್ದು, ನಿನ್ನೆ ಸಂಜೆ ಏಕಾಏಕಿ ಕಿರಿಕ್ ತೆಗೆದು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರನ್ನು ನಾಳೆ ಸಂಜೆಯೊಳಗೆ ಬಂಧಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ವ್ಯಾಪಾರಿಗಳು ಎಚ್ಚರಿಕೆ ನೀಡಿದ್ದಾರೆ.