ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಕೆ.ಆರ್. ನಗರ ಸಂತ್ರಸ್ತೆ ಕಿಡ್ನ್ಯಾಪ್ ಕೇಸ್‌ನಲ್ಲಿ ತಲೆಮರೆಸಿಕೊಂಡಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ ಬಂಧನಕ್ಕೆ ಕೋರ್ಟ್ ವಾರಂಟ್ ಜಾರಿ ಮಾಡಿದೆ.
ವಿಚಾರಣೆಗೆ ಆಗಮಿಸುವಂತೆ ಭವಾನಿ ರೇವಣ್ಣ ಅವರಿಗೆ ಎಸ್‌ಐಟಿ ನೋಟಿಸ್ ನೀಡಿತ್ತು. ಆದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿತ್ತು. ಈ ಬೆನ್ನಲ್ಲೇ ಭವಾನಿ ರೇವಣ್ಣ ವಿರುದ್ಧ 42ನೇ ಎಸಿಎಂಎಂ ಕೋರ್ಟ್ ಬಂಧನ ವಾರಂಟ್ ಹೊರಡಿಸಿದೆ. ಇತ್ತೀಚೆಗೆ ಭವಾನಿ ರೇವಣ್ಣ ಅವರನ್ನು ವಶಕ್ಕೆ ಪಡೆಯಲು ಹೊಳೆನರಸೀಪುರ ನಿವಾಸಕ್ಕೆ ತೆರಳಿದ್ದ ಎಸ್‌ಐಟಿ ಅಧಿಕಾರಿಗಳು ಸತತ 7 ಗಂಟೆ ಕಾದು ವಾಪಸ್ ಆಗಿದ್ದರು.
ವಿಚಾರಣೆಗೆ ಆಗಮಿಸುವುದಾಗಿ ಹೇಳಿದ್ದ ಭವಾನಿ ರೇವಣ್ಣ ಮನೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಅಧಿಕಾರಿಗಳು ವರದಿ ಮಾಡಿಕೊಂಡು ವಾಪಸ್ ತೆರಳಿದ್ದರು. ಇದೀಗ ಭವಾನಿ ರೇವಣ್ಣ ಬಂಧನಕ್ಕೆ ವಾರಂಟ್ ಪಡೆದಿದ್ದಾರೆ. ಎಚ್.ಡಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಅವರನ್ನು ಎಸ್‌ಐಟಿ ಬಂಧನ ಮಾಡಿತ್ತು. ಆದರೆ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿ ವಾರವೇ ಕಳೆದಿದೆ.
ಎಸ್‌ಐಟಿಯ ಎರಡು ನೋಟೀಸ್‌ಗಳಿಗೂ ಭವಾನಿ ಕ್ಯಾರೇ ಎಂದಿಲ್ಲ. ಎರಡು ಸಲ ನೋಟೀಸ್ ನೀಡಿದ ಬಳಿಕ, ʼತನಿಖೆಗೆ ಬೇಕಿದ್ದರೆ ಹೊಳೆನರಸೀಪುರದ ಮನೆಗೆ ಬನ್ನಿʼ ಎಂದು ಉತ್ತರಿಸಿದ್ದರು. ಎಸ್‌ಐಟಿ ಟೀಮ್ ಅಲ್ಲಿಗೆ ತೆರಳಿದಾಗ ಅಲ್ಲಿಂದ ನಾಪತ್ತೆಯಾಗಿದ್ದರು.
ಅಗತ್ಯವಿಲ್ಲ ಎನಿಸಿದರೂ ರೇವಣ್ಣರನ್ನು ಕರೆದುಕೊಂಡು ಬಂದು ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿ, ಜಾಮೀನು ದೊರೆಯದಂತೆ ತುಂಬಾ ಪ್ರಯತ್ನಿಸಿತ್ತು.
ಈ ಪ್ರಕರಣದಲ್ಲಿ ರೇವಣ್ಣ ಅವರ ಪಾತ್ರ ಹೆಚ್ಚೇನೂ ಇಲ್ಲ ಎಂದು ತಿಳಿದಿದ್ದರೂ, ಹೆಚ್ಚಿನ ವಿಚಾರಣೆಗೆ ಹೆಚ್ಚಿನ ಸಮಯ ಕಸ್ಟಡಿಗೆ ಕೊಡುವಂತೆ ನ್ಯಾಯಾಲಯವನ್ನು ಕೋರಿತ್ತು. ಆದರೆ ಭವಾನಿ ವಿಷಯದಲ್ಲಿ ಅಂಥ ತರಾತುರಿಯನ್ನು ಎಸ್‌ಐಟಿ ತೋರಿಸಿಲ್ಲ.