ಚಿತ್ರದುರ್ಗ : ಪ್ರಪಂಚಕ್ಕೆ ಮಾದರಿಯಾಗಿರುವ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ನೀಡಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ರವರ 133 ನೇ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಕೇವಲ ದಲಿತರಿಗಷ್ಟೆ ಸಂವಿಧಾನ ನೀಡಿಲ್ಲ. ಎಲ್ಲಾ ಜಾತಿ ಧರ್ಮದವರಿಗೂ ಸಮಾನತೆ ಕಲ್ಪಿಸಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶಕ್ಕೆ ಯಾವುದೇ ವ್ಯವಸ್ಥಿತವಾದ ಸಂವಿಧಾನವಿರಲಿಲ್ಲ. ರಾಜಕೀಯ, ಕೈಗಾರಿಕೆ, ಕೃಷಿ, ವ್ಯಾಪಾರ ವಹಿವಾಟು ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಕಾನೂನಿನಡಿ ಸಮಾನತೆ ಸಿಕ್ಕಿದೆ ಎಂದರೆ ಅದಕ್ಕೆ ಸಂವಿಧಾನ ಕಾರಣ. ಕಾಂಗ್ರೆಸ್ ಪಕ್ಷ ಸಂವಿಧಾನವನ್ನು ಅನುಷ್ಠಾನಗೊಳಿಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಸಂವಿಧಾನದಡಿ ಪ್ರತಿಯೊಬ್ಬರು ಸ್ವತಂತ್ರವಾಗಿ ಬದುಕುವ ಹಕ್ಕಿದೆ. ಯಾರ ಹಕ್ಕನ್ನು ಯಾರು ಕಸಿದುಕೊಳ್ಳುವಂತಿಲ್ಲ. ರಾಜ್ಯ ಬಿಜೆಪಿ. ಸರ್ಕಾರ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಹೆಣ್ಣು ಮಕ್ಕಳು ಹಿಜಾಬ್ ಧರಿಸುವುದನ್ನು ನಿಷೇಧಿಸಲು ಹೊರಟಿತಲ್ಲದೆ ಹಿಜಾಬ್, ಜಟ್ಕ ಕಟ್, ಹಲಾಲ್ ಕಟ್ ಹೀಗೆ ಅನೇಕ ಕ್ಯಾತೆಗಳನ್ನು ತಗೆದಿದ್ದರಿಂದ ಜನ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ ಪರಿಣಾಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಅದೆ ರೀತಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಹೋಗಿ ಸಂವಿಧಾನ ಹಾಗೂ ಕಾಂಗ್ರೆಸ್ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿ ಕಳೆದ ಬಾರಿಗಿಂತ ಈ ಸಾರಿ ಪ್ರತಿ ಬೂತ್ನಲ್ಲಿ ಹೆಚ್ಚಿಗೆ ನೂರು ಮತಗಳು ಸಿಗುವಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದರು.
ದೇಶದಲ್ಲಿ ಸಂವಿಧಾನ ಉಳಿದು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಶೋಷಿತರು ನೆಮ್ಮದಿಯಿಂದ ಬದುಕಬೇಕಾದರೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ಎಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಕಾರ್ಯಕರ್ತರು ತಮ್ಮ ತಮ್ಮ ವಾರ್ಡ್, ಬೂತ್, ಮನೆ ಸುತ್ತಮುತ್ತ ಕಾಂಗ್ರೆಸ್ ಗ್ಯಾರೆಂಟಿಗಳನ್ನು ತಿಳಿಸಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಇನ್ನು ಗ್ಯಾರೆಂಟಿಗಳನ್ನು ನೀಡಲಿದೆ ಎನ್ನುವುದನ್ನು ಮನವರಿಕೆ ಮಾಡಿ ಪಕ್ಷವನ್ನು ಗೆಲ್ಲಿಸುವ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಾಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್ಕುಮಾರ್, ಡಿ.ಎನ್.ಮೈಲಾರಪ್ಪ, ಉಪಾಧ್ಯಕ್ಷರುಗಳಾದ ನಜ್ಮತಾಜ್, ಎನ್.ಬಿ.ಟಿ.ಜಮೀರ್, ಹೆಚ್.ಶಬ್ಬೀರ್ಭಾಷ, ಶಬ್ಬೀರ್ ಅಹಮದ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ಸೈಯದ್ ಅಲ್ಲಾಭಕ್ಷಿ, ಭಾಗ್ಯಮ್ಮ, ಫೈಲ್ವಾನ್ ತಿಪ್ಪೇಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ, ಮಾಜಿ ಸದಸ್ಯ ಗಾಡಿಮಂಜುನಾಥ್, ರಘು, ಡಿ.ಕುಮಾರ್ ಪಿಳ್ಳೆಕೆರನಹಳ್ಳಿ, ಡಿ.ದುರುಗೇಶ್, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಜಯಣ್ಣ, ಪರಿಶಿಷ್ಟ ವರ್ಗಗಳ ವಿಭಾಗದ ಅಧ್ಯಕ್ಷ ಹೆಚ್.ಅಂಜಿನಪ್ಪ, ಪದವೀಧರ ವಿಭಾಗದ ಅಧ್ಯಕ್ಷ ಮುದಸಿರ್ ನವಾಜ್, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ರೇಣುಕ ಶಿವು, ಭಾಗ್ಯಮ್ಮ, ಪವಿತ್ರ, ವಲಿಖಾದ್ರಿ ಇನ್ನು ಅನೇಕರು ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿದ್ದರು.