ನವದೆಹಲಿ: ಸಂಸತ್ತಿಗೆ ನುಗ್ಗಿ ಆತಂಕ ಸೃಷ್ಟಿಸಿ ಸಂಸತ್ ನಲ್ಲಿ ಭದ್ರತೆ ಉಲ್ಲಂಘನೆಗೆ ಕಾರಣರಾಗಿದ್ದ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಆರೋಪಿಗಳಾದ ಸಾಗರ್ ಶರ್ಮಾ, ಡಿ.ಮನೋರಂಜನ್, ನೀಲಂ ದೇವಿ ಮತ್ತು ಅಮೋಲ್ ಶಿಂಧೆ ಇವರುಗಳನ್ನು ಹೆಚ್ಚಿನ ವಿಚಾರಣೆ ನಡೆಸಬೇಕಾಗಿರುವುದರಿಂದ ತನಿಖಾಧಿಕಾರಿಗಳ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕೀಲ ಅತುಲ್ ಶ್ರೀವಾಸ್ತವ ಅವರು, ನಾವು 15 ದಿನಗಳ ಪೊಲೀಸ್ ಕಸ್ಟಡಿಗೆ ವಿನಂತಿಸಿದ್ದೆವು, ಅದನ್ನು ನ್ಯಾಯಾಲಯವು ಪರಿಗಣಿಸಿ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಅನುಮತಿ ನೀಡಿದೆ ಎಂದು ಹೇಳಿದರು.
ಪೊಲೀಸ್ ಮೂಲಗಳ ಪ್ರಕಾರ, ನಾಲ್ವರು ಆರೋಪಿಗಳು ಈ ವಿಷಯದಲ್ಲಿ ತನಿಖಾ ತಂಡಕ್ಕೆ ಒಂದೇ ರೀತಿಯ ಉತ್ತರಗಳು ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಪೊಲೀಸ್ ವಿಚಾರಣೆ ವೇಳೆ ಲೋಕಸಭೆಯಲ್ಲಿ ನಡೆದ ಭದ್ರತಾ ಉಲ್ಲಂಘನೆಯ ಘಟನೆಗೆ ಎಲ್ಲಾ ಆರೋಪಿಗಳು ಸಾಮಾನ್ಯ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದು ನಾಲ್ವರು ಆರೋಪಿಗಳ ವಿರುದ್ಧ ಕಠಿಣ ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಈ ಹಿಂದೆ ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಲಲಿತ್ ಜಾ ಸಂಪೂರ್ಣ ಸಂಚಿನ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿತ್ತು. ಆದರೆ, ಪೊಲೀಸರು ಲಲಿತ್ ಜಾ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮಾತ್ರ ವಿಚಾರಗಳು ತಿಳಿಯಲಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.