ನವದೆಹಲಿ:ಮಂಗಳವಾರ ಸಂಸತ್ತಿನಲ್ಲಿ ನಡೆದ ಭಾರಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿರುವ ನಾಲ್ವರು ಆರೋಪಿಗಳನ್ನು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳನ್ನು ಹೊರತುಪಡಿಸಿ, ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಪ್ರಕರಣದಲ್ಲಿ ಸಾಗರ್ ಶರ್ಮ ಮತ್ತು ಮನೋರಂಜನ್ ಡಿ,ನೀಲಂ ದೇವಿ ಮತ್ತು ಅಮೋಲ್ ಶಿಂಧೆ ಬಂಧಿತ ಆರೋಪಿಗಳಾಗಿದ್ದಾರೆ.ಇನ್ನು ಈ ಪ್ರಕರಣದಲ್ಲಿ ನಾಲ್ವರಲ್ಲದೆ, ಇನ್ನಿಬ್ಬರು ಆರೋಪಿಗಳಾದ ಲಲಿತ್ ಜಾ ಮತ್ತು ವಿಕ್ಕಿ ಶರ್ಮ ಕೂಡ ಸಂಚಿನ ಭಾಗವಾಗಿದ್ದಾರೆ ಎಂದು ಹೇಳಲಾಗಿದೆ.
ಬಂಧಿತ ನಾಲ್ವರಲ್ಲಿ ಸಾಗರ್ ಶರ್ಮ ಮತ್ತು ಮನೋರಂಜನ್ ಡಿ ಹಳದಿ ಬಣ್ಣ ಹೊರ ಸೂಸುವ ಹೊಗೆ ಡಬ್ಬಿ ಅಥವಾ ಕ್ಯಾನಿಸ್ಟರ್ಗಳನ್ನು ಸಿಡಿಸಿ, ಸಂಸತ್ತಿನ ಒಳಗೆ ಗದ್ದಲ ಉಂಟು ಮಾಡುವ ಮೂಲಕ ಆತಂಕವನ್ನು ಸೃಷ್ಟಿಸಿದರು. ಅದೇ ಸಮಯದಲ್ಲಿ ಇನ್ನಿಬ್ಬರು ಆರೋಪಿಗಳಾದ ನೀಲಂ ದೇವಿ ಮತ್ತು ಅಮೋಲ್ ಶಿಂಧೆ ಸಂಸತ್ತಿನ ಹೊರಭಾಗದಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಕ್ಯಾನಿಸ್ಟರ್ಗಳನ್ನು ಸ್ಫೋಟಿಸಿ, ಸರ್ಕಾರಿ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.
ಇನ್ನು ಲಲಿತ್ ಜಾ ಮತ್ತು ವಿಕ್ಕಿ ಶರ್ಮ ಈ ಇಬ್ಬರು ಗುರುಂಗಾವ್ ಮೂಲದವರು.ಆರೋಪಿಗಳು ಕ್ಯಾನಿಸ್ಟರ್ಗಳನ್ನು ಸ್ಫೋಟಿಸುವ ವಿಡಿಯೋವನ್ನು ಚಿತ್ರೀಕರಿಸುತ್ತಿದ್ದ ಆರೋಪಿ ಲಲಿತ್ ಜಾ, ಎಲ್ಲರ ಸೆಲ್ಫೋನ್ಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಸದ್ಯ ಇನ್ನೂ ಈತನ ಪತ್ತೆಯಾಗಿಲ್ಲ. ಆರೋಪಿಗಳಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದ ವಿಕ್ಕಿ ಶರ್ಮ ಮತ್ತು ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಭಗತ್ ಸಿಂಗ್ ಫ್ಯಾನ್ ಕ್ಲಬ್ ಹೆಸರಿನಲ್ಲಿ ಈ ಎಲ್ಲ ಆರೋಪಿಗಳು ಸಾಮಾಜಿಕ ಜಾಲತಾಣ ಮೂಲಕ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿದೆ.