ಬೀದರ್:ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರ ಒತ್ತಡದಿಂದ ಭಾಲ್ಕಿಯಲ್ಲಿ ವಕೀಲೆ ಧನಲಕ್ಷ್ಮಿ ಬಳತೆ ಹಾಗೂ ಅವರ ಪತಿಯನ್ನು ನಡುರಾತ್ರಿ ಬಂಧಿಸಲಾಗಿದೆ. ಇದೊಂದು ಹೀನ, ನಾಚಿಕೆಗೇಡಿನ ಕೃತ್ಯವಾಗಿದೆ. ಇದನ್ನು ಖಂಡಿಸುತ್ತೇನೆ’ ಎಂದು ಕೇಂದ್ರ ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ. ನ್ಯಾಯಾಲಯದಿಂದ ತಡೆಯಾಜ್ಞೆ ಇದ್ದರೂ ಜಾಗದಿಂದ ತೆರವುಗೊಳಿಸಿರುವ ಕ್ರಮ ನಿಜಕ್ಕೂ ನಿರ್ಲಜ್ಜತನದಿಂದ ಕೂಡಿದೆ. ಇದು ತಲೆ ತಗ್ಗಿಸುವಂತಹ ಘಟನೆ. ಮಹಿಳೆ ಎನ್ನುವುದು ನೋಡದೆ ಬಂಧಿಸಿರುವುದು ಅಕ್ಷಮ್ಯ. ಜಾಮೀನು ಸಿಗದಿರುವ ತಪ್ಪು ಅವರೇನು ಮಾಡಿರಲಿಲ್ಲ. ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದ್ದರೂ ರಾಜಕೀಯ ಒತ್ತಡದಿಂದ ಕ್ರಮ ಕೈಗೊಂಡಿರುವುದು ಸರಿಯಲ್ಲ ಎಂದು ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈಶ್ವರ ಖಂಡ್ರೆಯವರು ತಮ್ಮ ಪ್ರತಿ ಭಾಷಣದಲ್ಲಿ ಬಸವಣ್ಣನವರ ವಚನಗಳನ್ನು ಉಲ್ಲೇಖಿಸುತ್ತಾರೆ. ಮಹಿಳೆಯರ ಮಾನ- ಸಮ್ಮಾನದ ಬಗ್ಗೆ ಹೇಳುತ್ತಾರೆ. ಆದರೆ, ಇಂತಹ ಕೆಲಸಕ್ಕೆ ಸಾಥ್ ಕೊಟ್ಟಿರುವುದು ನಿಮ್ಮ ನಡೆ ಮತ್ತು ನುಡಿಯಲ್ಲಿ ವ್ಯತ್ಯಾಸವಿದೆ ಎನ್ನುವುದು ಗೊತ್ತಾಗುತ್ತದೆ. ರಾಜ್ಯದ ಮಂತ್ರಿಯಾಗಿ, ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಹೆಣ್ಣು ಮಕ್ಕಳಿಗೆ ಕೊಡುವ ಗೌರವ ಇದೇನಾ? ಘಟನೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನತೆಯ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.