ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸೈಟ್ ಹಂಚಿಕೆಯಲ್ಲಿ ನಡೆದ ಹಗರಣ ತೀವ್ರ ಸ್ವರೂಪ ಪಡೆದುಕೊಂಡಿದೆ.
ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಹೆಸರು ಕೇಳಿಬಂದಿದ್ದರಿಂದ ರಾಜ್ಯ ರಾಜಕಾರಣದಲ್ಲಿ ಸಂಚಾಲವನ್ನೇ ಎಬ್ಭಿಸಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಇಂದು(ಜುಲೈ 04) ನಡೆದ ಸಚಿವ ಸಂಪುಟದಲ್ಲಿ ಮುಡಾ ಹಗರಣದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಲ್ಲದೇ ತಮ್ಮ ಕುಟುಂಬದ ಮೇಲೆ ಬಂದಿರುವ ಆರೋಪದ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದಾರೆ.
ಮುಡಾ ಹಗರಣ ಆರೋಪದಲ್ಲಿ ಹರುಳಿಲ್ಲ. ಕಾನೂನಿನ ಅನ್ವಯ ಪರಿಹಾರ ರೂಪದ ನಿವೇಶನ ಪಡೆದಿರುವುದು ಸ್ಪಷ್ಟ. ಬಿಜೆಪಿ ಸರ್ಕಾರದ ಕಾಲದಲ್ಲೇ ನಡಾವಳಿ ಆಗಿದೆ, ಪರಿಹಾರಕ್ಕೆ ಒಪ್ಪಿಗೆ ಸಿಕ್ಕಿದೆ ಎಂದು ಸಚಿವ ಸಂಪುಟ ಸಭೆಯಲ್ಲಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸಚಿವರಲ್ಲಿ ಇದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ನಮ್ಮ ಸರ್ಕಾರ ಬಂದ ಮೇಲೆ 2023, ಅಕ್ಟೋಬರ್ ನಲ್ಲೇ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದ್ದು, ಅದಕ್ಕೂ ಮುನ್ನವೇ ಪರಿಹಾರ ರೂಪದ ನಿವೇಶನ ನೀಡಲಾಗಿದೆ, ಯಾವುದೇ ಕಾನೂನು ಮೀರಿಲ್ಲ. ನಮ್ಮ ಮೇಲೆ ಬರುತ್ತಿರುವ ಆರೋಪಗಳೆಲ್ಲವೂ ಸುಳ್ಳು ಎಂದು ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ಗೆ ಸ್ಪಷ್ಟನೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರು ಅಕ್ರಮವಾಗಿ ಮುಡಾ ಸೈಟ್ ಪಡೆದುಕೊಂಡಿದ್ದಾರೆ. ಕಡಿಮೆ ಬೆಲೆಯ ತಮ್ಮ ಜಾಗವನ್ನು ಕೊಟ್ಟು, ಇದೀಗ ಹೆಚ್ಚಿನ ಬೆಲೆ ಬಾಳುವ ಸೈಟ್ಗಳನ್ನು ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಸಂಬಂಧ ಬಿಜೆಪಿ ನಾಯಕರು ಪ್ರತಿಭಟನೆಗಿಳಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು. ಅಲ್ಲದೇ ಈ ಹಗರಣ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸುತ್ತಿದ್ದಾರೆ.