ನವದೆಹಲಿ: ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಅವರು ದೆಹಲಿಯ ಅಪೋಲೋದಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ, ಮಾರ್ಚ್ 17 ರಂದು ಮೆದುಳಿನಲ್ಲಿ ಭಾರಿ ಊತ ಮತ್ತು ರಕ್ತಸ್ರಾವ ಪತ್ತೆಯಾದ ನಂತರ ಅವರನ್ನು ದೆಹಲಿಯ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಯಿತು.
ವರದಿಗಳ ಪ್ರಕಾರ, ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಡಾ.ವಿನೀತ್ ಸೂರಿ ಪರೀಕ್ಷಿಸಿ, ಎಂಆರ್‌ಐಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಅವರ ಮೆದುಳಿನಲ್ಲಿ ಭಾರಿ ರಕ್ತಸ್ರಾವ ಪತ್ತೆಯಾಗಿದೆ ಎಂದು ವರದಿಯಾಗಿದೆ. ಸದ್ಗುರು ಅವರ ಆರೋಗ್ಯ ವೇಗವಾಗಿ ಹದಗೆಟ್ಟಿದ್ದು, ವಾಂತಿ ಮತ್ತು ತಲೆನೋವಿನ ಕಾರಣದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಟಿ ಸ್ಕ್ಯಾನ್ ರಿಪೋರ್ಟ್‌ನಲ್ಲಿ ರಕ್ತಸ್ರಾವದ ಜೊತೆಗೆ ಅವರ ಮೆದುಳಿನಲ್ಲಿ ಗಂಭೀರ ಊತ ಕಂಡುಬಂದಿದ್ದು, ದೆಹಲಿಯ ಅಪೋಲೋ ವೈದ್ಯರಾದ ಡಾ.ವಿನೀತ್ ಸೂರಿ, ಡಾ.ಪ್ರಣವ್ ಕುಮಾರ್, ಡಾ.ಸುಧೀರ್ ತ್ಯಾಗಿ ಮತ್ತು ಡಾ.ಎಸ್.ಚಟರ್ಜಿ ಅವರ ತಂಡವು ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸದ್ಯ ಸದ್ಗುರು ಅವರನ್ನು ವೆಂಟಿಲೇಟರ್ನಿಂದ ಮುಕ್ತಗೊಳಿಸಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.