ಬೇಸಿಗೆಯಲ್ಲಿ ನಮ್ಮ ತ್ವಚೆಯ ಬಗ್ಗೆ ಎಷ್ಟು ಕಾಳಜಿ ಮಾಡಿದರೂ ಸಾಲದು. ಬಿಸಿಲಿನಿಂದಾಗಿ ಚರ್ಮವು ಬಹಳ ಬೇಗ ಟ್ಯಾನ್ ಆಗುತ್ತದೆ, ಚರ್ಮ ಸುಟ್ಟಂತೆ ಆಗಿ, ಶುಷ್ಕವಾಗುತ್ತದೆ. ಹೀಗಾಗಿ ಹಲವರು ಸನ್ಸ್ಕ್ರೀನ್ ಲೋಷನ್’ಗಳನ್ನು ಹಚ್ಚುತ್ತಾರೆ.
ಬೇಸಿಗೆಯಲ್ಲಿ, ಟ್ಯಾನಿಂಗ್, ಪಿಗ್ಮೆಂಟೇಶನ್ ಮತ್ತು ಸನ್ಬರ್ನ್ ಸಾಮಾನ್ಯ ಸಮಸ್ಯೆಗಳಾಗಿವೆ. ಹಾಗೇ, ಸೂರ್ಯನ UVA ಕಿರಣಗಳು ನೇರವಾಗಿ ಚರ್ಮದ ಮೇಲೆ ಬೀಳುವುದರಿಂದ ಚರ್ಮ ಹಾನಿಗೊಳಗಾಗುತ್ತದೆ. ಸನ್ಸ್ಕ್ರೀನ್ ಲೋಷನ್ನ ಸರಿಯಾದ ಬಳಕೆಯು ಈ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
ತ್ವಚೆಯ ಆರೈಕೆಯಲ್ಲಿ ಸನ್‌ಸ್ಕ್ರೀನ್‌ನ ಪ್ರಾಮುಖ್ಯತೆಯು ಮುಖ್ಯವಾಗಿದೆ. ಸೂರ್ಯನ ಹಾನಿಕಾರಕ ಕಿರಣಗಳಿಂದ ಇದು ಚರ್ಮವನ್ನು ರಕ್ಷಣೆ ಮಾಡುತ್ತದೆ. ಹಾಗೆಂದು ಸನ್ ಸ್ಕ್ರೀನ್ ಗಳನ್ನು ಹೇಗೆಂದರೆ ಹಾಗೆ ಬಳಕೆ ಮಾಡುವುದೂ ಸರಿ ಹೋಗುವುದಿಲ್ಲ. ಸನ್ಸ್ಕ್ರೀನ್ ಲೋಷನ್ನ ಸರಿಯಾದ ಬಳಕೆಯು ಈ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಈ ನಿಟ್ಟಿನಲ್ಲಿ ಸಾಕಷ್ಟು ಜನರಿಗೆ ಸನ್ ಸ್ಕ್ರೀನ್ ಲೋಷನ್ ಎಂದರೇನು? ಅದರ ಬಳಕೆ ಹೇಗೆ? ಎಷ್ಟರ ಪ್ರಮಾಣದಲ್ಲಿ ಬಳಕೆ ಮಾಡಬೇಕು? ಯಾವ ರೀತಿಯ ಸನ್ ಸ್ಕ್ರೀನ್ ಆಯ್ಕೆ ಮಾಡಿಕೊಳ್ಳಬೇಕು? ಯಾವಾಗ ಬಳಕೆ ಮಾಡಬೇಕು ಎಂಬ ಹಲವು ಪ್ರಶ್ನೆಗಳು ಇದ್ದೇ ಇರುತ್ತವೆ… ಆ ಪ್ರಶ್ನೆಗಳಿಗೆ ಇಲ್ಲಿದೆ ಮಾಹಿತಿ…
ಉತ್ತಮ ಸನ್ ಸ್ಕ್ರೀನ್ ಕ್ರೀಂಗಳು ವಿಟಮಿನ್ ಎ, ಬಿ, ಇ ಮತ್ತು ಎಫ್ ಅಂಶಗಳನ್ನು ಒಳಗೊಂಡಿದ್ದು, ತ್ವಚೆಗೆ ಬೇಕಾದ ಪೋಷಣೆ ನೀಡುತ್ತವೆ. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ಚರ್ಮದ ರಕ್ಷಣೆ ಮಾಡುತ್ತವೆ. ಅಲ್ರ್ಟಾ ವಯೊಲೆಟ್ ಕಿರಣಗಳಿಂದ ರಕ್ಷಣೆ ನೀಡುತ್ತವೆ. ಚರ್ಮದಲ್ಲಿನ ಶುಷ್ಕತೆಯನ್ನು ಕಡಿಮೆ ಮಾಡಿ, ಚರ್ಮವು ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತವೆ.
ಸನ್ ಸ್ಕ್ರೀನ್ ಕ್ರೀಮ್ ಗಳು ಟ್ಯಾನಿಂಗ್, ಸನ್ಬರ್ನ್ ಮತ್ತು ಅಕಾಲಿಕ ಚರ್ಮದ ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತವೆ. ಎಣ್ಣೆಯುಕ್ತ ಅಥವಾ ಮೊಡವೆ ಪೀಡಿತ ಚರ್ಮವನ್ನು ಸರಿಪಡಿಸುತ್ತವೆ. ಸನ್ ಸ್ಕ್ರೀನ್ ಕ್ರೀಂ ತೆಳುವಾಗಿರುವ ಕಾರಣ ಚರ್ಮವು ಬೇಗನೇ ಹೀರಿಕೊಳ್ಳುತ್ತದೆ. ಕ್ರೀಮ್ ತ್ವಚೆಯ ಹೊಳಪಿಗೆ ಒಳ್ಳೆಯದು. ಇದು ಪಿಗ್ಮೆಂಟೇಶನ್ ವಿರುದ್ಧ ಹೋರಾಡುತ್ತದೆ. ಕಲೆಗಳು ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಸನ್ಕ್ರೀನ್ ಬಳಸಬಹುದು. ಚರ್ಮವನ್ನು ಮೃದು ಮತ್ತು ನಯವಾಗಿ ಮಾಡುತ್ತದೆ.
ಸನ್ ಸ್ಕ್ರೀನ್ ಗಳ ಆಯ್ಕೆ ಹೇಗೆ?
ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಆಯ್ಕೆಗಳನ್ನು ನೋಡಿದರೆ, ಯಾವುದು ಉತ್ತಮವಾದದ್ದು, ಯಾವುದು ಅಲ್ಲ ಎಂಬ ಸಾಕಷ್ಟು ಗೊಂದಲಗಳು ಮೂಡುವುದುಂಟು.
ಸನ್ ಸ್ಕ್ರೀನ್ ಕ್ರೀಮ್‍ಗಳನ್ನು ಖರೀದಿಸುವಾಗ ಅದರ ಮೇಲೆ ಎಸ್‍ಪಿಎಫ್ ಪ್ರಮಾಣ ಎಷ್ಟಿದೆ ಎನ್ನುವುದನ್ನು ಮೊದಲು ಪರಿಗಣಿಸಬೇಕು. ಎಸ್‍ಪಿಎಫ್ ಎಂದರೆ, ಸನ್ ಪ್ರೊಟೆಕ್ಷನ್ ಫ್ಯಾಕ್ಟರ್. ಇದನ್ನು ಹಚ್ಚಿಕೊಂಡರೆ ಸೂರ್ಯನ ಬಿಸಿಲಿನ ಅಪಾಯದಿಂದ ಎಷ್ಟು ಕಾಲದವರೆಗೆ ಚರ್ಮವನ್ನು ರಕ್ಷಿಕೊಳ್ಳಬಹುದು ಎಂಬುದನ್ನು ನಿರ್ಧರಿಸಲು ಸಹಾಯ ಮಾಡುವ ರೇಟಿಂಗ್ ಆಗಿದೆ.
ಇದನ್ನು ಸರಳವಾಗಿ ಹೇಳುವುದಾದರೆ, ಸನ್‍ಸ್ಟ್ರೀನ್ ಹಚ್ಚದೆ ಹೊರಗೆ ಹೋದಾಗ 20 ನಿಮಿಷಗಳಲ್ಲಿ ಸನ್‍ಬರ್ನ್ ಆದರೆ, ಎಸ್‍ಪಿಎಫ್ ಹಚ್ಚಿಕೊಂಡು ಹೋದಾಗ ನೀವು ಅದರ 10 ಪಟ್ಟು (3 ಗಂಟೆ 30 ನಿಮಿಷ) ಅವಧಿಯ ವರೆಗೆ ಸೂರ್ಯನ ಕಿರಣಗಳಿಂದ ಸುರಕ್ಷಿತವಾಗಿರಬಹುದು.
ಚರ್ಮವನ್ನು ದೀರ್ಘ ಸಮಯದ ವರೆಗೆ ಸೂರ್ಯನ ಕಿರಣಗಳಿಂದ ರಕ್ಷಿಸುವಂತಹ, ಸೂಕ್ತ ಎಸ್‍ಪಿಎಫ್ ಮೌಲ್ಯವುಳ್ಳ ಸನ್‍ಸ್ಟ್ರೀನ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಕೊಂಚ ಕಷ್ಟದ ಕೆಲಸವೆ. ಸನ್‍ಸ್ಕ್ರೀನನ್ನು ಆಯ್ಕೆ ಮಾಡಿಕೊಳ್ಳುವಾಗ ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.
ಎಸ್‍ಪಿಎಫ್ ಕ್ರೀಮ್ ಗಳು 40+ ಎಸ್‍ಪಿಎಫ್ ಗಿಂತ ಹೆಚ್ಚಿರಬೇಕು. 40 ಎಸ್‍ಪಿಎಫ್ ಕ್ರೀಮ್ ಶೇ. 97.5ರಷ್ಟು ಯುವಿಬಿ ರೇಡಿಯಂಟ್‍ಗಳಿಂದ ರಕ್ಷಿಸಿದರೆ, 50 ಎಸ್‍ಪಿಎಫ್ ಕ್ರೀಮ್ ಶೇ. 98ರಷ್ಟು ಯುವಿಬಿ ರೇಡಿಯಂಟ್‍ಗಳಿಂದ ರಕ್ಷಣೆ ನೀಡುತ್ತದೆ. ಹೆಚ್ಚು ಸಮಯ ಸೂರ್ಯನ ಬಿಸಿಲಿನಲ್ಲಿ ಇರುವವರು ಹೆಚ್ಚು ಪ್ರಮಾಣದ ಎಸ್‍ಪಿಎಫ್ ಸನ್ ಸ್ಕ್ರೀನ್ ಕ್ರೀಮ್‍ಗಳನ್ನು ಬಳಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
ಬ್ರಾಡ್ ಸ್ಪೆಕ್ಟ್ರಮ್ ಸನ್‍ಸ್ಟ್ರೀನ್: ಕನಿಷ್ಟ ಎಸ್‍ಪಿಎಫ್ 30 ಉಳ್ಳ ಬ್ರಾಡ್ ಸ್ಪೆಕ್ರ್ಟಮ್ ಸನ್‍ಸ್ಕ್ರೀನ್, ಶೇ.97ರಷ್ಟು ಸೂರ್ಯ ಕಿರಣಗಳನ್ನು ತಡೆಯಬಹುದು. ಎಸ್‍ಪಿಎಫ್ ಹೆಚ್ಚಿದ್ದಷ್ಟು ಸೂರ್ಯನ ಅಲ್ಟ್ರಾ ವಯೊಲೆಟ್ ಕಿರಣಗಳಿಂದ ಹೆಚ್ಚು ಕಾಪಾಡುತ್ತದೆ ಎಂದರ್ಥ.
ಅವಧಿ: ಎಸ್‍ಪಿಎಫ್ ಮೌಲ್ಯದ ಹೊರತಾಗಿ, ಅದನ್ನು ಉತ್ತಮ ಪ್ರಮಾಣದಲ್ಲಿ ಹಚ್ಚಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ. ಚರ್ಮಕ್ಕೆ ಆಗುವ ಹಾನಿಯನ್ನು ತಪ್ಪಿಸಿಕೊಳ್ಳಲು, ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಮನೆಯಿಂದ ಹೊರ ಹೋಗುವುದನ್ನು ಆದಷ್ಟು ತಪ್ಪಿಸಿಕೊಳ್ಳಿ. ಸನ್‍ಸ್ಕ್ರೀನ್ ನೀರು ಮತ್ತು ಬೆವರು ನಿರೋಧಕವಾಗಿರಬೇಕು. ಹಾಗೆಯೇ ಪ್ರತಿ 2 ಗಂಟೆಗೊಮ್ಮೆ ಸನ್‍ಸ್ಕ್ರೀನ್ ಮರುಲೇಪನ ಮಾಡುವುದನ್ನು ಮರೆಯಬಾರದು.
ದಿನ ನಿತ್ಯದ ಚಟುವಟಿಕೆ: ಸರಿಯಾದ ಎಸ್‍ಪಿಎಫ್ ಆಯ್ಕೆ ಮಾಡುವುದು ಕಿರಿಕಿರಿಯ ಕೆಲಸವಾಗಿರಬಹುದು, ಆದರೆ ಅದು ನಮ್ಮ ಕೆಲಸ ಮತ್ತು ಹೊರಗಿನ ಜವಾಬ್ಧಾರಿಗಳನ್ನು ಅವಲಂಬಿಸಿರುತ್ತದೆ. ನೀವು ನಿತ್ಯವೂ ಹೊರ ಹೋಗುವವರಾಗಿದ್ದರೆ, ಎಸ್‍ಪಿಎಫ್ 15 (ಅಲ್ಟ್ರಾ ವಯೊಲೆಟ್ ಕಿರಣಗಳಿಂದ 93 ಶೇಕಡಾ ರಕ್ಷಣೆ) ನಿಂದ ಎಸ್‍ಪಿಎಫ್ 50 (ಅತಿ ನೇರಳೆ ಕಿರಣಗಳಿಂದ 98 ಶೇಕಡಾ ರಕ್ಷಣೆ) ನಡುವಿನ ಸನ್‍ಸ್ಟ್ರೀನ್‍ನನ್ನು ಆಯ್ಕೆ ಮಾಡಿಕೊಳ್ಳಿ. ಸರಿಯಾದ ಎಸ್‍ಪಿಎಫ್ ಆಯ್ಕೆ ಮಾಡಿಕೊಳ್ಳುವಾಗ ನಿಮ್ಮ ಅಗತ್ಯ ಮತ್ತು ಅವಧಿಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ.
ಸನ್ ಸ್ಕ್ರೀನ್ ಕ್ರೀಮ್‍ನಲ್ಲಿ ಸಾಕಷ್ಟು ರಾಸಾಯನಿಕ ಪದಾರ್ಥಗಳನ್ನು ಬಳಸಲಾಗಿರುತ್ತವೆ. ಅವು ನಿಮ್ಮ ಚರ್ಮದ ಮೇಲೆ ಸಾಕಷ್ಟು ಹಾನಿಯನ್ನು ಉಂಟುಮಾಡಬಹುದು. ಹಾಗಾಗಿ ನಿಮ್ಮ ಚರ್ಮದ ವಿಧ ಹಾಗೂ ಯಾವ ಬಗೆಯ ಸನ್ಸ್ ಕ್ರೀಮ್ ಬಳಕೆ ಮಾಡಬೇಕು? ಎನ್ನುವುದನ್ನು ಮೊದಲು ಚರ್ಮ ತಜ್ಞರು ಅಥವಾ ಸೌಂದರ್ಯ ತಜ್ಞರಲ್ಲಿ ಪರಿಶೀಲಿಸಿಕೊಳ್ಳಿ. ನಂತರ ಅದರ ಬಳಕೆಯನ್ನು ಮುಂದುವರಿಸಿ. ಆಗ ಚರ್ಮವು ಹಿತವಾದ ಆರೋಗ್ಯದಿಂದ ಮತ್ತು ಆಕರ್ಷಣೆಯಿಂದ ಕಂಗೊಳಿಸುವುದು.
ಈ ಮೇಲಿನ ಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳಿ ಮತ್ತು ಸೂರ್ಯನ ಕಿರಣಗಳಿಂದ ರಕ್ಷಿಸಿಕೊಳ್ಳುವ ನಿಮ್ಮ ಉಪಾಯಗಳನ್ನು ಇನ್ನಷ್ಟು ಉತ್ತಮಗೊಳಿಸಿ.
ಬಳಕೆ ಹೇಗೆ…?
ಸೂರ್ಯನ ಕಿರಣ ಹೆಚ್ಚು ಬೀಳುವ ಮುಖ, ಕೈ-ಕಾಲುಗಳನ್ನು ಸ್ವಚ್ಛಗೊಳಿಸ, ಮೃದು ಬಟ್ಟೆಯಿಂದ ನಯವಾಗಿ ಒರೆಸಿ. ನಂತರ ಎರಡು ಬೆರಳುಗಳ ತುದಿಯಿಂದ ಕ್ರೀಮ್ ತೆಗೆದುಕೊಂಡು ಮುಖ ಹಾಗೂ ಕೈಕಾಲುಗಳ ಮೇಲೆ ನಯವಾಗಿ ಹಚ್ಚಿಕೊಳ್ಳಿ. ಕೇವಲ ಮುಖವಷ್ಟೇ ಅಲ್ಲ, ಕುತ್ತಿಗೆ ಭಾಗಕ್ಕೂ ಹಚ್ಚಬೇಕು.
ಮೇಕ್ ಅಪ್ ಮಾಡಿಕೊಳ್ಳುವವರೂ ಮೇಕಪ್ ಗೂ ಮುನ್ನ ಸನ್ ಸ್ಕ್ರೀನ್ ಹಚ್ಚಿಕೊಳ್ಳಬೇಕು. ಕೆಲವು ನಿಮಿಷಗಳ ಬಳಿಕ ಬೇರೆ ಯಾವುದೇ ಕ್ರೀಮ್ ಗಳನ್ನು ಹಚ್ಚಿಕೊಳ್ಳಬಹುದು.
ಸನ್‌ಸ್ಕ್ರೀನ್ ಅನ್ನು ಯಾವಾಗ ಬಳಸಬೇಕು?
ಯುವಿ ಕಿರಣಗಳು ವರ್ಷಪೂರ್ತಿ ಇರುತ್ತವೆ. ಆದ್ದರಿಂದ ಸನ್‌ಸ್ಕ್ರೀನ್’ಗಳನ್ನು ಪ್ರತಿನಿತ್ಯ ಬಳಕೆ ಮಾಡುವುದು ಉತ್ತಮ. ಬೆವರು ಅಥವಾ ಚರ್ಮವನ್ನು ಆಗಾಗ್ಗೆ ಉಜ್ಜಿಕೊಳ್ಳುವ ಅಭ್ಯಾಸವಿದ್ದರೆ, ಪ್ರತಿ ಎರಡು ಗಂಟೆಗಳಿಗೊಮ್ಮೆ ಕ್ರೀಮ್ ನ್ನು ಹಚ್ಚಿವುದರಿಂದ ನಿಮ್ಮ ಚರ್ಮವು ಹಿತವಾದ ಆರೋಗ್ಯದಿಂದ ಮತ್ತು ಆಕರ್ಷಣೆಯಿಂದ ಕಂಗೊಳಿಸುವುದು.