ಚಾಮರಾಜನಗರ : ಆ ಗ್ರಾಮದ ಮಕ್ಕಳು ಶಾಲೆಗೆ ತೆರಳಬೇಕು ಎಂದರೆ ಕಾಡಿನ ರಸ್ತೆಯ ಮಧ್ಯೆ ನಡೆದುಕೊಂಡು ಹೋಗಬೇಕಾಗಿತ್ತು. ಕೊನೆಗೂ ಮಕ್ಕಳು ಸಮಸ್ಯೆ ಬಗೆಹರಿಸುವುದಕ್ಕೆ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರವೊಂದನ್ನು ಬರೆದರು. ಈ ಪತ್ರದಿಂದಾಗಿ ಸಮಸ್ಯೆಗೆ ತಾತ್ಕಾಲಿಕ ಮುಕ್ತಿ ದೊರಕಿದೆ. ಮಕ್ಕಳ ಪತ್ರದಿಂದ ಸಮಸ್ಯೆ ಸಡಿಲವಾಗಿದೆ.
ಹೌದು ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದ ವಿದ್ಯಾರ್ಥಿಗಳು ಪ್ರತಿದಿನ ಕಾಡಿನ ದಾರಿಗೆ 10 ಕಿಲೋಮೀಟರ್ ನಡೆದು ಶಾಲೆಗೆ ತೆರಳಬೇಕಾದ ಪರಿಸ್ಥಿತಿಗೆ ಕೊನೆಗೂ ಮುಕ್ತಿ ಸಿಕ್ಕಿದಂತಾಗಿದೆ. ಗ್ರಾಮಕ್ಕೆ ಸರಿಯಾದ ರಸ್ತೆ ಹಾಗೂ ಸಾರಿಗೆ ಸೌಲಭ್ಯಗಳ ಕೊರತೆಯಿಂದ ಉಂಟಾದ ಸಮಸ್ಯೆಯನ್ನು ವಿದ್ಯಾರ್ಥಿಗಳು ನೇರವಾಗಿ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ ನಂತರ, ಜಿಲ್ಲಾಡಳಿತ ತುರ್ತು ಕ್ರಮ ಜರುಗಿಸಿದೆ.
ಪಚ್ಚೆದೊಡ್ಡಿ ಗ್ರಾಮಕ್ಕೆ ರಸ್ತೆ ಸುಧಾರಣೆ ಇಲ್ಲದ ಕಾರಣ ಸಾರಿಗೆ ಇಲಾಖೆ ಬಸ್ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಸದ್ಯವರೆಗೆ ಸೀಮಿತ ಮಟ್ಟದಲ್ಲಿ ನೆರವಾಗುತ್ತಿದ್ದ ಅರಣ್ಯ ಇಲಾಖೆಯ ವಾಹನ ಸಂಚಾರವೂ ಕೆಲವು ದಿನಗಳಿಂದ ನಿಲ್ಲಿಸಲ್ಪಟ್ಟಿತ್ತು. ಇದರ ಪರಿಣಾಮವಾಗಿ ವಿದ್ಯಾರ್ಥಿಗಳು ಕಾಡಿನ ಮಧ್ಯೆ ದುಸುಮಾರು 10 ಕಿ.ಮೀ ನಡೆದು ಶಾಲೆಗೆ ಹೋಗಿ ಬರಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದರು.
ದಿನನಿತ್ಯದ ಕಷ್ಟದಿಂದ ಬೇಸತ್ತ ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು ವಿವರಿಸಿ ಮುಖ್ಯಮಂತ್ರಿಗಳಿಗೆ ಪತ್ರ ರಚಿಸಿ ಕಳುಹಿಸಿದರು. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ವಿಷಯ ಅಧಿಕಾರಿಗಳ ಗಮನಕ್ಕೆ ತಲುಪಿತು. ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಾತ್ಕಾಲಿಕ ಪರಿಹಾರ ಕೈಗೊಂಡಿದ್ದಾರೆ. ಅರಣ್ಯ ಇಲಾಖೆಯ ಸಫಾರಿ ವಾಹನವನ್ನು ವಿದ್ಯಾರ್ಥಿಗಳಿಗಾಗಿ ನಿಯೋಜಿಸಲಾಗಿದ್ದು, ಪ್ರತಿದಿನದ ಶಾಲಾ ಸಂಚಾರಕ್ಕೆ ಬಳಸಲಾಗುತ್ತಿದೆ.
ಅರಣ್ಯ ಇಲಾಖೆಯ ಅಧಿಕಾರಿ ಭಾಸ್ಕರ್ ಅವರು ಮಂಗಳವಾರ ಬೆಳಿಗ್ಗೆ ಸ್ವತಃ ಪಚ್ಚೆದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಸಫಾರಿ ವಾಹನದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಪ್ರಸ್ತುತ ವ್ಯವಸ್ಥೆ ತಾತ್ಕಾಲಿಕವಾಗಿದ್ದು, ಗ್ರಾಮಕ್ಕೆ ರಸ್ತೆ ಸುಧಾರಣೆ ಹಾಗೂ ನಿಯಮಿತ ಸಾರಿಗೆ ಸಂಚಾರವನ್ನು ಪ್ರಾರಂಭಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸಂಕಷ್ಟಕ್ಕೆ ತ್ವರಿತ ಸ್ಪಂದನೆ ನೀಡಿದ ಜಿಲ್ಲಾಡಳಿತಕ್ಕೆ ಗ್ರಾಮಸ್ಥರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.






























