ಕಾರವಾರ : ಇಲ್ಲಿನ ರವೀಂದ್ರನಾಥ ಠಾಗೋರ್ ಕಡಲ ತೀರಕ್ಕೆ ವಲಸೆ ಬಂದ ಸೀಗಲ್ ಹಕ್ಕಿಯಲ್ಲಿ ಜಿಪಿಎಸ್ ಟ್ರ್ಯಾಕರ್ ಕಂಡುಬಂದಿದೆ.
ಇಲ್ಲಿನ ತಿಮ್ಮಕ್ಕ ಗಾರ್ಡನ್ ಹಿಂಬದಿಯಲ್ಲಿ ಕೂತಿದ್ದ ಸೀಗಲ್ ಹಕ್ಕಿಯ ಬೆನ್ನಿನ ಭಾಗದಲ್ಲಿ ಜಿಪಿಎಸ್ ಟ್ರ್ಯಾಕರ್ ಕಂಡುಬಂದಿದೆ. ಭಿನ್ನವಾಗಿ ಕಂಡ ಈ ಹಕ್ಕಿಯನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆಯ ಮರೈನ್ ಕಡಲ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಬಂದ ಅಧಿಕಾರಿಗಳು ಹಕ್ಕಿಯನ್ನು ಹಿಡಿದು ಹಕ್ಕಿಯನ್ನು ಪರಿಶೀಲಿಸಿದರು. ಹಕ್ಕಿಯ ಬೆನ್ನಿನಲ್ಲಿದ್ದ ಜಿಪಿಎಸ್ ನಲ್ಲಿ ಚೈನೀಸ್ ವಿಜ್ಞಾನ ಅಕಾಡೆಮಿಯ ರಿಸರ್ಚ್ ಸೆಂಟರ್ ಫಾರ್ ಇಕೋ-ಎನ್ವಿರಾನ್ಮೆಂಟಲ್ ಸೈನ್ಸ್ ವಿಳಾಸವಿದೆ. ಶ್ರೀಲಂಕಾ ವನ್ಯಜೀವಿ ಸಂಶೋಧನಾ ಮಂಡಳಿ ಈ ಸೀಗಲ್ ಹಕ್ಕಿಗಳ ಚಲನ ವಲನ, ಆಹಾರ ಹಾಗೂ ವಲಸೆಯನ್ನು ಗುರುತಿಸಲು ಜಿಪಿಎಸ್ ಟ್ರ್ಯಾಕರ್ ಬಳಸಿದ್ದರು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಕ್ಕಿಗೆ ಗಾಯವಾದ ಕಾರಣ ಅದು ಹಾರಲಾಗದ ಸ್ಥಿತಿಯಲ್ಲಿತ್ತು . ಅರಣ್ಯ ಅಧಿಕಾರಿಗಳು ಶ್ರೀಲಂಕಾ ವನ್ಯಜೀವಿ ಅಕಾಡೆಮಿಯ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದು, ಹಕ್ಕಿಯನ್ನು ಮರೈನ್ ಅರಣ್ಯ ವಿಭಾಗದ ಕಚೇರಿಯಲ್ಲಿ ರಕ್ಷಿಸಲಾಗಿದೆ.

































