ಬೆಂಗಳೂರು: ಸರ್ಕಾರಕ್ಕೆ ಒಳ್ಳೆ ಹೆಸರು ತರುವ ಕೆಲಸ ಮಾಡಬೇಕು, ಇಲ್ಲದಿದ್ದರೆ ಬೇರೆ ಜಾಗ ನೋಡಿಕೊಳ್ಳಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ 2023-24 ಮೊದಲ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ಪ್ರತಿ ಹಳ್ಳಿ, ಪ್ರತಿ ಪಂಚಾಯಿತಿಯಲ್ಲೂ ಕುಡಿಯುವ ನೀರಿನ ಸ್ಥಿತಿಗತಿ ಅರಿತು ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಬೇಕು.
ಸಭೆಗೆ ಬರುವ ಮುನ್ನ ಸಿದ್ಧತೆಯನ್ನೇ ಮಾಡಿಕೊಂಡು ಬಂದಿಲ್ಲ. ಸಭೆಯ ಗಂಭೀರತೆಯೇ ನಿಮಗೆ ಅರ್ಥವಾಗಿಲ್ಲ.
“ಪ್ರತಿ ಕಚೇರಿಯಲ್ಲಿ ಏನು ಕೆಲಸ ನಡೆಯುತ್ತದೆ ಎನ್ನುವ ವರದಿ ಪಡೆದುಕೊಳ್ಳುವ ವ್ಯವಸ್ಥೆ ನನ್ನ ಬಳಿ ಇದೆ. ನಾನು ಅದನ್ನು ಬಿಚ್ಚಿ ನಿಮ್ಮ ಮರ್ಯಾದೆ ತೆಗೆದರೆ, ಮಾಧ್ಯಮದವರು ನಿಮ್ಮ ಜನ್ಮ ಜಾಲಾಡಿ ಬಿಡುತ್ತಾರೆ. ಆದರೆ ಆ ಕೆಲಸವನ್ನು ನಾನು ಮಾಡುವುದಿಲ್ಲ”
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿಗಳ ಸಾವು-ನೋವು, ಡೆಂಗ್ಯೂ ಜ್ವರ, ಮಳೆ ಕೊರತೆ, ಬರ, ಕುಡಿಯುವ ನೀರು ಮತ್ತಿತರ ವಿಚಾರಗಳ ಬಗ್ಗೆ ಒಬ್ಬರೂ ವರದಿ ಕೊಟ್ಟಿಲ್ಲ.
ಅಧಿಕಾರಿಗಳೇ ನಿಮಗೆ ಹೇಳೋರು, ಕೇಳೋರು ಯಾರೂ ಇಲ್ಲ ಅಂತಾ ತಿಳಿದುಕೊಂಡಿದ್ದೀರಾ? ನಿಮಗೆ ಕೆಲಸ ಮಾಡೋ ಆಸಕ್ತಿ ಇಲ್ಲ ಅಂದ್ರೆ ಜಾಗ ಖಾಲಿ ಮಾಡಿ.
ನಿಮ್ಮದೇ ಲೋಕದಲ್ಲಿ ವಿಹರಿಸುತಿದ್ದೀರಿ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಮುಖ ಆಗುಹೋಗುಗಳ ಬಗ್ಗೆ ವರದಿ ಕೊಡಬೇಕೆಂಬ ಕನಿಷ್ಟ ಸೌಜನ್ಯ ನಿಮಗೆ ಇಲ್ಲವೇ?
ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರ ಕೆಲಸಗಳನ್ನು ಸಮಾನವಾಗಿ ಮಾಡಿ. ಜನರು ಸರ್ಕಾರಿ ಕಚೇರಿಗಳಿಗೆ ತಮ್ಮ ಕಷ್ಟಗಳನ್ನು ಬಗೆಹರಿಸಿಕೊಳ್ಳಲು ಬರುತ್ತಾರೆ. ಅವರ ಕೆಲಸಗಳನ್ನು ವಿಳಂಬವಿಲ್ಲದೆ ಸೂಕ್ತ ಕಾಲದಲ್ಲಿ ಮಾಡಿಕೊಡಬೇಕು ಎಂದು ಎಚ್ಚರಿಸಿದ್ದಾರೆ.