ಬೆಂಗಳೂರು: ಸರ್ಕಾರಿ ಅಧಿಕಾರಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರಲ್ಲದೆ ಜೀವ ಬೆದರಿಕೆಯೊಡ್ಡಿದ್ದಾರೆಂದು ಆರೋಪಿಸಿ ಮಹಿಳಾ ಉದ್ಯೋಗಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಕಾನೂನು ಮತ್ತು ಅಭಿಯೋಜನಾ ಇಲಾಖೆಯ ಕಾನೂನು ಅಧಿಕಾರಿ (ಹಿರಿಯ) ಕಚೇರಿಯ ಆಡಳಿತಾಧಿಕಾರಿ ನಾರಾಯಣಸ್ವಾಮಿ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಮಹಿಳಾ ಉದ್ಯೋಗಿ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಾನು ಈ ಹಿಂದೆ ದಾವಣಗೆರೆಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ವರ್ಷ ವಿವಿ ಟವರ್‌ನಲ್ಲಿರುವ ಬೆಂಗಳೂರು ನಗರ ವಿಭಾಗದ ಕಾನೂನು ಅಧಿಕಾರಿಗಳ (ಹಿರಿಯ) ಕಚೇರಿಗೆ ವರ್ಗಾವಣೆಗೊಂಡಿದ್ದೇನೆ.
ಇದೇ ಕಚೇರಿಯಲ್ಲಿ ಎಒ ಆಗಿ ಕಾರ್ಯನಿರ್ವಹಿಸುತ್ತಿರುವ ನಾರಾಯಣಸ್ವಾಮಿ ಅವರು ಜನವರಿಯಿಂದ ಲೈಂಗಿಕ ಕಿರುಕುಳ ನೀಡಲಾರಂಭಿಸಿದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಮತ್ತೊಬ್ಬ ಸಹೋದ್ಯೋಗಿಯ ಮೂಲಕ ಒತ್ತಡ ಹೇರಿದ್ದರು ಎಂದು ದೂರಿದ್ದಾರೆ. ಜೂನ್ 14ರಂದು ಕಚೇರಿ ಸಹಾಯಕ ಕೂಡ ನಾರಾಯಣಸ್ವಾಮಿ ಜತೆ ಹೊಂದಾಣಿಕೆ ಮಾಡಿಕೊಳ್ಳಿ ಎಂದು ಪೀಡಿಸಿದ್ದ. ಅದಕ್ಕೂ ನಾನು ಒಪ್ಪಿರಲಿಲ್ಲ. ನನಗೀಗ ಬೇರೆಡೆಗೆ ವರ್ಗಾವಣೆಯಾಗಿದ್ದು, ಇಲಾಖೆಯಲ್ಲಿ ಹೇಗೆ ಕೆಲಸ ಮಾಡುತ್ತಿಯಾ ನೋಡುತ್ತೇನೆ ಎಂದು ನಾರಾಯಣಸ್ವಾಮಿ ಬೆದರಿಸುತ್ತಿದ್ದಾರೆ. ಈ ಬಗ್ಗೆ ಅನ್ಯಾಯದ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದೆ. ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ. ವಿಧಾನಸೌಧ ಪೊಲೀಸರು ನಾರಾಯಣಸ್ವಾಮಿ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿ ಎಫ್‌ಐಆರ್ ದಾಖಲಿಸಿದ್ದಾರೆ.