ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯ ಕೊಲೆ- ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಹಿರಂಗ

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾ ಸರ್ಕಾರಿ ಆಸ್ಪತ್ರೆಯಲ್ಲಿ ಟ್ರೈನಿ ಮಹಿಳಾ ವೈದ್ಯೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ಮಹಿಳಾ ವೈದ್ಯೆಯ ಹತ್ಯೆಗೂ ಮುನ್ನವೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು ಎಂಬ ಮಾಹಿತಿಯು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಹಿರಂಗವಾಗಿದೆ. ಈ ಬೆನ್ನಲ್ಲೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಈ ಆರೋಪಿಯ ಬಂಧನಕ್ಕೆ ಕಾರಣವಾಗಿದ್ದು ಒಂದು ಬ್ಲ್ಯೂಟೂತ್‌ ಹೆಡ್‌ಸೆಟ್‌ ಎಂಬುದು ಗಮನಾರ್ಹ ಸಂಗತಿಯಾಗಿದೆ. ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದ 31 ವರ್ಷದ ಮಹಿಳೆಯು ಕಳೆದ ಗುರುವಾರ (ಆಗಸ್ಟ್‌ 8) ಆರ್‌ ಕೆ ಕರ್‌ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಅಧ್ಯಯನ ಮಾಡಲು ಹೋಗಿದ್ದ ಹತ್ಯೆಗೀಡಾಗಿದ್ದರು. ಶುಕ್ರವಾರ ಬೆಳಗ್ಗೆ ಮಹಿಳಾ ವೈದ್ಯೆಯ ಶವವು ಪತ್ತೆಯಾಗಿದೆ. ಇದಾದ ಬಳಿಕ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದೆ. ಈ ಸಂಬಂಧ ಮಾಹಿತಿ ನೀಡಿರುವ ಕೋಲ್ಕತ್ತಾ ಪೊಲೀಸ್‌ ಆಯುಕ್ತ ವಿನೀತ್‌ ಕುಮಾರ್‌ ಗೋಯಲ್, ‘ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಮಹಿಳೆಯು ಅಭ್ಯಾಸ ಮಾಡುತ್ತಿದ್ದರು. ಇದೇ ವೇಳೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಶುಕ್ರವಾರ ಬೆಳಗ್ಗೆ ಮಹಿಳೆಯ ಶವವು ಪತ್ತೆಯಾಗಿದೆ. ಮರಣೋತ್ತರ ವರದಿ ಬಳಿಕ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಕೊಲೆ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ’ ಎಂದು ತಿಳಿಸಿದ್ದಾರೆ. ವೈದ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಕೊಲೆ ಪ್ರಕರಣವು ಭಾರಿ ಸುದ್ದಿಯಾಗಿದ್ದು, ಪ್ರತಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ. ಸಾರ್ವಜನಿಕರೂ ಈ ಕುರಿತು ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣದ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ. ‘ಆರೋಪಿಗಳು ಯಾರೇ ಆಗಿದ್ದರೂ, ಅವರನ್ನು ಬಂಧಿಸಿ ಗಲ್ಲಿಗೇರಿಸಲಾಗುವುದು’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ರಾಜ್ಯದ ಹಲವೆಡೆ ಪ್ರಕರಣ ಖಂಡಿಸಿ ಪ್ರತಿಭಟನೆಗಳೂ ನಡೆದಿವೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement