ಮುಂಬೈ: ಮಹಾರಾಷ್ಟ್ರದ ನಾಂದೇಡ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ 24 ಗಂಟೆಗಳಲ್ಲಿ 12 ನವಜಾತ ಶಿಶುಗಳು ಸೇರಿ 24 ರೋಗಿಗಳು ಸಾವನ್ನಪ್ಪಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಚವಾಣ್, ’12 ನವಜಾತ ಶಿಶುಗಳು ಮತ್ತು 12 ಮಂದಿ ವಯಸ್ಕರು ಸೇರಿ ಒಟ್ಟು 24 ಜನ ಪ್ರಾಣ ಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ 70 ಜನರು ಇನ್ನೂ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ ಎಂದು ದೂರಿದ್ದಾರೆ. ನಾಂದೇಡ್ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್ ಚವಾಣ್ ಅವರು, ‘ಒಟ್ಟು 24 ಜೀವಗಳು ಬಲಿಯಾಗಿವೆ, ಇನ್ನೂ 70 ಮಂದಿಯ ಸ್ಥಿತಿ ಗಂಭೀರವಾಗಿದೆ. ವೈದ್ಯಕೀಯ ಸೌಲಭ್ಯಗಳ ಕೊರತೆಯಿದೆ ಮತ್ತು ಸಿಬ್ಬಂದಿ ಸೇರಿ ಅನೇಕ ದಾದಿಯರನ್ನು ವರ್ಗಾಯಿಸಲಾಗಿದೆ ಮತ್ತು ಅವರ ಬದಲಿ ಯಾರೊಬ್ಬರನ್ನೂ ಇಲ್ಲಿಗೆ ವರ್ಗಾವಣೆ ಮಾಡಿಲ್ಲ. ಅನೇಕ ಯಂತ್ರಗಳು ಕೆಲಸ ಮಾಡುತ್ತಿಲ್ಲ’ ಎಂದು ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಮಹಾರಾಷ್ಟ್ರದ ನಾಂದೇಡ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆಯಿಂದ 12 ನವಜಾತ ಶಿಶುಗಳು ಸೇರಿದಂತೆ 24 ಜನರು ಸಾವನ್ನಪ್ಪಿದ ಸುದ್ದಿ ಅತ್ಯಂತ ದುಃಖಕರವಾಗಿದೆ. ಎಲ್ಲಾ ದುಃಖಿತ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಬಿಜೆಪಿ ಸರ್ಕಾರವು ತನ್ನ ಪ್ರಚಾರಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಆದರೆ ಮಕ್ಕಳಿಗೆ ಔಷಧಿ ನೀಡಲು ಸರ್ಕಾರದ ಬಳಿ ಹಣವಿಲ್ಲವೇ? ಬಿಜೆಪಿಯ ದೃಷ್ಟಿಯಲ್ಲಿ ಬಡವರ ಪ್ರಾಣಕ್ಕೆ ಬೆಲೆ ಇಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.