‘ಸರ್ಕಾರಿ ಗೌರವದೊಂದಿಗೆ ನಟಿ ಲೀಲಾವತಿಯವರ ಅಂತ್ಯಸಂಸ್ಕಾರ’ – ಸಿಎಂ

ಬೆಂಗಳೂರು: ಕನ್ನಡ ಚಿತ್ರರಂಗ ಕಂಡಂತಹ ಬಹುಮುಖ ಪ್ರತಿಭೆಯಾಗಿದ್ದ ನಟಿ ಲೀಲಾವತಿಯವರಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಲು ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ನಟಿ ಶ್ರೀಮತಿ ಲೀಲಾವತಿಯವರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವವನ್ನು ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿ,ಲೀಲಾವತಿಯವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ಅವರ ನಿವಾಸಕ್ಕೆ ತೆರಳಿ ಅವರ ಯೋಗಕ್ಷೇಮ ವಿಚಾರಿಸಿದ್ದೆ. ಆಗ ಅವರ ಮಗ ವಿನೋದರಾಜ್ ರನ್ನು ಭೇಟಿಯಾಗಿ, ಅವರಿಗೆ ಯಾವುದೇ ರೀತಿಯ ಸಹಾಯ ಮಾಡಲು ಸರ್ಕಾರ ಸಿದ್ಧವಿದೆ ಎಂದು ಧೈರ್ಯ ತುಂಬಲಾಗಿತ್ತು. ಲೀಲಾವತಿ ಹಾಗೂ ವಿನೋದರಾಜ್ ಅವರ ತಾಯಿಮಗನ ಸಂಬಂಧ ಆದರ್ಶಮಯವಾದದ್ದು ಎಂದರು.

ರಂಗಭೂಮಿಯಿಂದ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಲೀಲಾವತಿಯವರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನೈಜ್ಯ ನಟನೆಗೆ ಹೆಸರಾಗಿದ್ದ ಅವರು ದಕ್ಷಿಣ ಭಾರತದ ಎಲ್ಲ ಭಾಷಾ ಚಿತ್ರರಂಗದಲ್ಲಿ ನಟಿಸಿದ್ದಾರೆ. ಬಹುಭಾಷಾ ಕಲಾವಿದರಾಗಿದ್ದ ಲೀಲಾವತಿಯವರು ನಾಯಕಿ, ಪೋಷಕ ನಟಿಯಾಗಿ ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ಡಾ. ರಾಜ್ ಕುಮಾರ್ ಹಾಗೂ ಲೀಲಾವತಿಯವರದು ಜನಪ್ರಿಯ ಜೋಡಿಯಾಗಿದ್ದು, ತನ್ನ ವಿದ್ಯಾರ್ಥಿ ದೆಸೆಯಲ್ಲಿ ಗೆಜ್ಜೆಪೂಜೆ, ಕುಲವಧು, ಭಕ್ತ ಕುಂಬಾರ ಸೇರಿದಂತೆ ಅನೇಕ ಚಲನಚಿತ್ರಗಳನ್ನು ವೀಕ್ಷಿಸಿರುವುದಾಗಿ ಮುಖ್ಯಮಂತ್ರಿಗಳು ಸ್ಮರಿಸಿದರು.

Advertisement

ಲೀಲಾವತಿಯವರು ಒಬ್ಬ ಪರಿಪೂರ್ಣ ಕಲಾವಿದರಾಗಿದ್ದರು. ಐತಿಹಾಸಿಕ, ಸಾಮಾಜಿಕ, ಪೌರಾಣಿಕ ಪಾತ್ರಗಳನ್ನು ಲೀಲಾಜಾಲವಾಗಿ, ಮನೋಜ್ಞವಾಗಿ ಅಭಿನಯಿಸುತ್ತಿದ್ದರು. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಲೀಲಾವತಿಯವರು ಆಸ್ಪತ್ರೆ, ಪಶುವೈದ್ಯಕೀಯ ಆಸ್ಪತ್ರೆ ಗಳನ್ನು ನಿರ್ಮಿಸಿದ್ದರು. ರೈತಾಪಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ಲೀಲಾವತಿಯವರು ಪ್ರಾಣಿಗಳನ್ನು ಪ್ರೀತಿಯಿಂದ ಕಾಣುತ್ತಿದ್ದರು. ಪ್ರಾಣಿಗಳೆಡೆಗಿನ ಪ್ರೀತಿ ಅವರಿಗೆ ರಕ್ತಗತವಾಗಿ ಬಂದಿದೆ ಎಂದರು.

ಕರೋನಾ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡುತ್ತಿದ್ದ ಲೀಲಾವತಿಯವರು ಮನುಷ್ಯತ್ವದ ಮೂರ್ತರೂಪವಾಗಿದ್ದರು. ತಾನು ಗಳಿಸಿದ್ದನ್ನು ಪರರಿಗೆ ಹಂಚುವ ದೊಡ್ಡ ಗುಣ ಅವರಲ್ಲಿತ್ತು. ಅವರ ಪ್ರತಿಭೆಗೆ ಪದ್ಮಶ್ರೀ ಪ್ರಶಸ್ತಿ ಯಂತಹ ರಾಷ್ಟ್ರಮಟ್ಟದ ಪ್ರಶಸ್ತಿ ದೊರೆಯದಿರುವುದು ದುರಂತ ಎಂದು ತಿಳಿಸಿದರು.

ನಟಿ ಲೀಲಾವತಿ ಯವರ ಸಾವು ಆಘಾತವನ್ನುಂಟು ಮಾಡಿದ್ದು, ಕನ್ನಡ ಚಿತ್ರರಂಗವಲ್ಲದೇ , ಭಾರತೀಯ ಸಿನಿಮಾ ರಂಗಕ್ಕೂ ಲೀಲಾವತಿಯವರ ನಿಧನದಿಂದ ತುಂಬಲಾರದ ನಷ್ಟವುಂಟಾಗಿದೆ. ಅವರ ಕುಟುಂಬ ಹಾಗೂ ಅಪಾರ ಅಭಿಮಾನ ಬಳಗಕ್ಕೆ ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಹಾರೈಸಿದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement