ಬೆಂಗಳೂರು: ಸರ್ಕಾರಿ ನೌಕರರ 7ನೇ ವೇತನ ಆಯೋಗದ ಅವಧಿಯನ್ನು ಮತ್ತೆ ವಿಸ್ತರಿಸಲು ಆರ್ಥಿಕ ಇಲಾಖೆಯು ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಿದ್ದು, ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ನೌಕರರ ವೇತನ ಶ್ರೇಣಿಗಳ ಪರಿಷ್ಕರಣೆಗಾಗಿ ಹಿಂದಿನ ಬಿಜೆಪಿ ಸರ್ಕಾರವು ನಿವೃತ್ತ ಮುಖ್ಯಕಾರ್ಯದರ್ಶಿ ಸುಧಾಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ 2022ರ ನ.19ರಂದು ಆಯೋಗ ರಚಿಸಿತ್ತು.
ವರದಿ ಸಲ್ಲಿಸಲು 6 ತಿಂಗಳ ಗಡುವು ನೀಡಲಾಗಿತ್ತು. ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅವಧಿಯನ್ನು ಮತ್ತೆ 6 ತಿಂಗಳು ವಿಸ್ತರಿಸಿತ್ತು. ಈ ಅವಧಿ ಇದೇ ನ.18ಕ್ಕೆ ಮುಗಿಯಲಿದೆ.
ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಾಣಿಕೆ ಮಾಡುವ ಸವಾಲು ಈಗ ರಾಜ್ಯ ಸರ್ಕಾರದ ಮೇಲೆ ಇದೆ. ಇನ್ನೊಂದೆಡೆ ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದೆ. ಹೀಗಾಗಿ ತಕ್ಷಣಕ್ಕೆ ನೌಕರರ ವೇತನ ಪರಿಷ್ಕರಣೆ ಮಾಡಿದರೆ ಆರ್ಥಿಕ ಹೊರೆಯಾಗಲಿದೆ ಎಂದು ಆರ್ಥಿಕ ಇಲಾಖೆಯ ಅಧಿಕಾರಿಗಳು ಸಿಎಂಗೆ ಸಲಹೆ ನೀಡಿದ್ದಾರೆ.