ಬೆಳಗಾವಿ: ಸಹಕಾರ ಬ್ಯಾಂಕುಗಳಲ್ಲಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಅಸಲನ್ನು ಕಟ್ಟಿದರೆ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಸಾಲಮನ್ನಾ ಮಾಡುವ ಕುರಿತು ನಾವು ನಮ್ಮ ಪ್ರಾಣಾಳಿಕೆಯಲ್ಲಿ ಹೇಳಿಲ್ಲ. ಬಿಜೆಪಿಯವರು 2018 ರ ಪ್ರಣಾಳಿಕೆಯಲ್ಲಿ ನಮ್ಮ ಸರಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ರಾಷ್ಟ್ರೀಕೃತ ಬ್ಯಾಂಕು ಮತ್ತು ಸಹಕಾರಿ ಸಂಘಗಳಲ್ಲಿ ಇರುವ 1 ಲಕ್ಷದವರೆಗೆ ರೈತರ ಬೆಳೆ ಸಾಲ ಮನ್ನಾ ಮಾಡಲಾಗುವುದು” ಎಂದು ಹೇಳಿದ್ದರು. ಆದರೆ ಬಿಜೆಪಿಯವರು ಈ ಕುರಿತು ಏನಾದರೂ ಮಾಡಿದರಾ? ನಯಾಪೈಸೆ ಬಿಡುಗಡೆ ಮಾಡಿದರಾ? ಹೇಳಿ ಎಂದು ಪ್ರಶ್ನಿಸಿದರು.
ಯಡಿಯೂರಪ್ಪನವರು 2019 ರ ಆಗಸ್ಟ್‌ನಲ್ಲಿ ಅತಿವೃಷ್ಟಿಯ ಕಾರಣಕ್ಕೆ ಬೆಳೆ ಹಾನಿಯಾಗಿತ್ತು. ಆಗ ಶಿವಮೊಗ್ಗದಲ್ಲಿ ಯಡಿಯೂರಪ್ಪನವರು ಏನು ಹೇಳಿದರು ಗೊತ್ತಾ? “ಕೇಳಿದಷ್ಟು ಹಣ ಕೊಡಲು ಸರ್ಕಾರದಲ್ಲಿ ನೋಟ್ ಪ್ರಿಂಟ್ ಮಾಡುವ ಯಂತ್ರವಿಲ್ಲ” . ಎಂದು ಹೇಳಿದ್ದರು. ಯಡಿಯೂರಪ್ಪನವರು ಈ ರೀತಿ ಹೇಳಿದ್ದು ಇದೇ ಮೊದಲಲ್ಲ. 2009 ರಲ್ಲಿ ವಿಧಾನಪರಿಷತ್ತಿನಲ್ಲಿ ನಮ್ಮ ವಿರೋಧ ಪಕ್ಷದ ನಾಯಕರಾಗಿದ್ದ ವಿ ಎಸ್ ಉಗ್ರಪ್ಪ ಮುಂತಾದ ನಮ್ಮ ಪಕ್ಷದವರು ಸಾಲ ಮನ್ನಾ ಮಾಡಿ ಎಂದು ಆಗ್ರಹಿಸಿದ್ದಾಗಲೂ ಯಡಿಯೂರಪ್ಪನವರು ಇದೇ ಮಾತುಗಳನ್ನಾಡಿದ್ದರು.
ಮತಕ್ಕಾಗಿ ಇತರ ಪಕ್ಷದವರು ಹೇಳಿದಂತೆ ನಾನು ಕೂಡ ರೈತರ ಕೃಷಿ ಮನ್ನಾ ಮಾಡುತ್ತೇನೆಂದು ಚುನಾವಣೆಯ ಸಂದರ್ಭದಲ್ಲಿ ಆಶ್ವಾಸನೆ ನಿಡಿದ್ದೆ. ಆದರೆ ಇದು ಸಾಧ್ಯವಿಲ್ಲ ಎಂಬುದು ಈಗ ಅರ್ಥವಾಗುತ್ತಿದೆ, ಸಾಲ ಮನ್ನಾ ಮಾಡಲು ಹಣ ಎಲ್ಲಿದೆ? ಎಂದು ವಿರೋಧ ಪಕ್ಷದ ಸದಸ್ಯರನ್ನೆ ಪ್ರಶ್ನಿಸಿದ್ದರು.
ರೈತರ ಸಾಲ ಮನ್ನಾ ಮಾಡಲು ನಾನು ಸಿದ್ಧನಿದ್ದೇನೆ. ಆದರೆ ಬೊಕ್ಕಸದಲ್ಲಿ ಹಣದ ಕೊರತೆ ಇದೆ. ಆದುದರಿಂದ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದಿದ್ದರು ಜೊತೆಗೆ ವಿಧಾನಸೌಧದಲ್ಲಿ ಕೂತು ನಾನು ನೋಟ್ ಪ್ರಿಂಟ್ ಮಾಡುತ್ತಿಲ್ಲ ಎಂದು ಉತ್ತರ ಹೇಳಿದ್ದರು.
ವಿಶೇಷವಾಗಿ ನಂಜುಡಪ್ಪನವರ ವರದಿಯ ಅನುಷ್ಠಾನ ಹಾಗೂ ಅದರ ಫಲಶ್ರುತಿಯನ್ನು ಅಧ್ಯಯನ ಮಾಡಲು ನುರಿತ ಅರ್ಥಶಾಸ್ತ್ರಜ್ಞರೊಬ್ಬರ ಅಧ್ಯಕ್ಷತೆಯಲ್ಲಿ ಹೈಪವರ್ [ಉನ್ನತಾಧಿಕಾರ ಸಮಿತಿ] ಕಮಿಟಿಯನ್ನು ರಚಿಸಲಾಗುವುದು ಎಂದರು.