ಮೈಸೂರು: ಸಾಮೂಹಿಕವಾಗಿ ಗ್ಯಾರಂಟಿ ಯೋಜನೆ ನೀಡುವುದನ್ನು ನಿಲ್ಲಿಸೋದೆ ಒಳಿತು. ಜನರು ಕಾಂಗ್ರೆಸ್ ಗ್ಯಾರಂಟಿ ಇಷ್ಟವಾಗಿಲ್ಲ ಎನ್ನುವುದನ್ನು ಫಲಿತಾಂಶದ ಮೂಲಕ ತೋರಿಸಿದ್ದಾರೆ ಎಂದು ಮೈಸೂರು-ಕೊಡಗು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಎಂದು ಹೇಳಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಟ್ಟಿ ಭಾಗ್ಯಗಳನ್ನು ಕೊಟ್ಟು ರಾಜ್ಯದ ಜನರನ್ನು ಸೋಂಭೇರಿ ಮಾಡುತ್ತಿದ್ದೀರಿ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರು. ಇದೀಗ ಮತದಾರರು ಅವರನ್ನು ಬೆಂಬಲಿಸಿದ್ದಾರೆ. ಅವರಿಗೆ ಗ್ಯಾರಂಟಿ ಯೋಜನೆಗಳ ಅವಶ್ಯಕತೆಯಿಲ್ಲ ಅನ್ನೋದು ಇದರಿಂದ ಸ್ಪಷ್ಟವಾಗುತ್ತದೆ. ಗ್ಯಾರಂಟಿ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು ಈಗ ಮರು ಪರಿಶೀಲಿಸಬೇಕು ಎಂದರು.
ಸಮಾಜದ ಉನ್ನತ ವರ್ಗಗಳ ಪೈಕಿ ಶೇಕಡ೭೦ರಷ್ಟು ಜನ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಆದರೆ ಅದನ್ನು ಜನರು ತಿರಸ್ಕರಿಸಿದ್ದಾರೆ. ತಿಂಗಳಿಗೆ 25,000 ಸಂಬಳ ಪಡೆಯುವ ವ್ಯಕ್ತಿಗೆ ಪುಕ್ಕಟೆ ಕರೆಂಟ್ ಕೊಟ್ಟರೆ ಹೇಗೆ? ಈಗಲೂ ಗ್ಯಾರಂಟಿ ಹಣದಿಂದಲೇ ಜೀವನ ನಡೆಸುವ ಜನ ಇದ್ದಾರೆ. ಅಂತಹವರನ್ನು ನೋಡಿ ಗ್ಯಾರಂಟಿ ರೀ ಲುಕ್ ಮಾಡುವ ಅಗತ್ಯ ಇದೆ. ಕಾರುಗಳಲ್ಲಿ ಓಡಾಡವವರು ಗೃಹಲಕ್ಷ್ಮಿ ಯೋಜನೆ ಪ್ರಯೋಜನ ಯಾಕೆ ಪಡೆಯಬೇಕು? ಹುಣಸೂರಿನ ಹಲವು ಹಳ್ಳಿಗಳಲ್ಲಿ ಕೇವಲ ಒಂದೇ ಸಮುದಾಯದವರು ಇದ್ದಾರೆ. ಅಲ್ಲಿ ಬಿಜೆಪಿಗೆ 600ಕ್ಕೂ ಹೆಚ್ಚು ಮತ ನೀಡಿದ್ರೆ ನನಗೆ ಕೇವಲ 3, 7 ಮತಗಳನ್ನ ನೀಡಿದ್ದಾರೆ. ಒಕ್ಕಲಿಗರು ನನಗೆ ಮತ ಹಾಕಿಲ್ಲ ಅಸಮಧಾನ ಹೊರಹಾಕಿದ್ದಾರೆ.