ಅಸ್ಸಾಂ:ಸಿಲ್ಚಾರ್ ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ್ದ ನವಜಾತ ಶಿಶು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು. ಆದರೆ ಪವಾಡ ಎಂಬಂತೆ ನವಜಾತ ಶಿಶುವಿನ ಅಂತ್ಯಕ್ರಿಯೆ ನಡೆಸುವ ಮುನ್ನವೇ ಮಗು ಜೀವಂತವಾಗಿರುವ ಘಟನೆ ನಡೆದಿರುವುದು ವರದಿಯಾಗಿದೆ.
ನವಜಾತ ಶಿಶುವಿನ ತಂದೆ ರತನ್ ದಾಸ್ ಅವರ ಹೇಳಿಕೆ ಪ್ರಕಾರ, ಆರು ತಿಂಗಳ ಗರ್ಭಿಣಿ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಖಾಸಗಿ ಆಸ್ಪತ್ರೆಗೆ ಕರೆ ತಂದಿದ್ದರು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಇದು ತುಂಬಾ ಕ್ಲಿಷ್ಟ ಸಮಸ್ಯೆಯಾಗಿದ್ದು, ನಮಗೆ ಒಂದೋ ತಾಯಿಯನ್ನು ಇಲ್ಲವೇ ಮಗುವನ್ನು ಮಾತ್ರ ಬದುಕಿಸಲು ಸಾಧ್ಯ ಎಂದು ತಿಳಿಸಿದ್ದರು.
ಅದರಂತೆ ವೈದ್ಯರು ಡೆಲಿವರಿ ಮಾಡಿದ್ದು, ನಿಮ್ಮ ಪತ್ನಿ ಅವಧಿ ಪೂರ್ವ ಮಗುವಿಗೆ ಜನ್ಮ ನೀಡಿದ್ದು, ಮಗು ಸಾವನ್ನಪ್ಪಿದ್ದೆ ಹೇಳಿ, ಬುಧವಾರ ಬೆಳಗ್ಗೆ ನವಜಾತ ಶಿಶುವಿನ ಶವವನ್ನು ಒಪ್ಪಿಸಿದ್ದರು ಎಂದು ದಾಸ್ ತಿಳಿಸಿದ್ದಾರೆ.
ಮಗುವಿನ ಶವವನ್ನು ಅಸ್ಪತ್ರೆಯಲ್ಲಿ ಪ್ಯಾಕ್ ಮಾಡಿ ಕೊಟ್ಟಿದ್ದು, ನಂತರ ನಾವು ಶವ ಸಂಸ್ಕಾರ ಮಾಡಲು ಸ್ಮಶಾನಕ್ಕೆ ತೆರಳಿ ಅಂತಿಮ ವಿಧಿವಿಧಾನ ನಡೆಸಲು ಪ್ಯಾಕ್ ಅನ್ನು ತೆರೆದಾಗ ಮಗು ಅಳಲು ಪ್ರಾರಂಭಿಸಿತ್ತು. ತಕ್ಷಣ ಮಗುವನ್ನು ಆಸ್ಪತ್ರೆಗೆ ತಂದು ದಾಖಲಿಸಿದ್ದು, ಇದೀಗ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ದಾಸ್ ವಿವರಿಸಿದ್ದಾರೆ.
ಬಳಿಕ ಖಾಸಗಿ ಆಸ್ಪತ್ರೆಯ ವಿರುದ್ಧ ಪ್ರತಿಭಟನೆ ನಡೆಸಿ, ಬೇಜವಾಬ್ದಾರಿ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ ನಿರ್ಲಕ್ಷ್ಯಕದ ವಿರುದ್ಧ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಎಫ್ ಐಆರ್ ದಾಖಲಾಗಿದೆ ಎಂದು ವರದಿ ತಿಳಿಸಿದೆ.