ಬೆಂಗಳೂರು : ಸಿಇಟಿ ಪರೀಕ್ಷೆಯಲ್ಲಿ ಪಠ್ಯೇತರ ಪ್ರಶ್ನೆಗಳನ್ನು ಕೇಳಿರುವುದರಿಂದ ಉಂಟಾಗಿರುವ ಗೊಂದಲ, ಆತಂಕ ನಿವಾರಣೆಗೆ ರಾಜ್ಯ ಸರ್ಕಾರ ಸಮಿತಿವೊಂದನ್ನು ರಚಿಸಿದೆ.
ಯಾವ ಯಾವ ವಿಷಯದಲ್ಲಿ ಎಷ್ಟೆಷ್ಟು ಪಠ್ಯೇತರ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ವಿಷಯವಾರು ಪ್ರತ್ಯೇಕ ತಜ್ಞರ ಸಮಿತಿ ರಚಿಸಿದೆ. ಹೌದು ಸಿಇಟಿ ಯಲ್ಲಿ ಔಟ್ ಆಫ್ ಸಿಲಬಸ್‌ನ 50ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೊಟ್ಟಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿರುದ್ಧ ವಿದ್ಯಾರ್ಥಿಗಳು ಮತ್ತು ಪೋಷಕರು ಸಿಡಿದೆದ್ದಿದ್ದರು. ಈ ಬೆನ್ನಲ್ಲೇ ಎಚ್ಚೆತ್ತ ಉನ್ನತ ಶಿಕ್ಷಣ ಇಲಾಖೆ ಏಪ್ರಿಲ್ 18,19 ರಂದು ನಡೆದಿದ್ದ ಸಿಇಟಿ ಪರೀಕ್ಷೆಯಲ್ಲಿ ಔಟ್ ಆಫ್ ಸಿಲಬಸ್ ಪ್ರಶ್ನೆಗಳ ವಿಚಾರವಾಗಿ ತಜ್ಞರ ಸಮಿತಿ ರಚಿಸಿದೆ. ತಜ್ಞರ ಸಮಿತಿಯು ತನ್ನ ವರದಿಯನ್ನು ತಕ್ಷಣವೇ ನೀಡುವಂತೆ ಆದೇಶಿಸಿದೆ. ಸಿಇಟಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ‘ಕೆಇಎ’ ಯು ಕಾರ್ಯನಿರ್ವಹಿಸಲಿದೆ. ತಜ್ಞರ ಸಮಿತಿಯ ವರದಿಯನ್ನು ಆಧರಿಸಿ ಈ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆಯು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.