ಬೆಂಗಳೂರು: ಕುಮಾರಸ್ವಾಮಿ ಅವರ ಭಾವನಾತ್ಮಕ ಮಾತು ಮತ್ತು ಕಣ್ಣೀರು ಜನರಿಗೆ ಬೇಸರವಾಗಿ ಹೋಗಿದೆ ಅಂದಿದ್ದಾರೆ. ಪಾಪ.. ಇವರು ಎಂದೂ ಜನರ ಮುಂದೆ ಕಣ್ಣೀರೇ ಹಾಕಿಲ್ಲವೇ? ಹೌದು, ನಾನು ಜನರ ಕಷ್ಟ ನೋಡಿ ಕಣ್ಣೀರು ಹಾಕ್ತಿದ್ದೇನೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಹಾಸನಕ್ಕೆ ತೆರಳುವ ಮುನ್ನ ತಮ್ಮ ನಿವಾಸದಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯ ಸರ್ಕಾರ ಅಧಿಕಾರ, ಹಣದ ದುರ್ಬಳಕೆಯಿಂದ ಗೆದ್ದಾಗಿದೆ ಎಂದು ಬೀಗುತ್ತಿದ್ದಾರೆ. ಇವರಿಗೆ ಚನ್ನಪಟ್ಟಣದಲ್ಲಿ ನಿಲ್ಲಿಸೋಕೆ ಕಾಂಗ್ರೆಸ್ ಪಕ್ಷದಿಂದ ಒಬ್ಬ ಅಭ್ಯರ್ಥಿ ಸಿಗಲಿಲ್ಲ. ಹೀಗಾಗಿ ಬಿಜೆಪಿಯಿಂದ ಅಭ್ಯರ್ಥಿ ಹೈಜಾಕ್ ಮಾಡಿಕೊಂಡು ಹೋಗಿದ್ದಾರೆ. ಇಷ್ಟಾದರೂ ಕುತಂತ್ರ ಬೇರೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲವನ್ನೂ ಜನ ಗಮನಿಸುತ್ತಿದ್ದಾರೆ. ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ನನ್ನ ಕೆಲಸದ ಆಧಾರದಲ್ಲಿ ಮತ ಕೇಳುತ್ತೇನೆ ಎಂದು ತಿಳಿಸಿದರು.
