ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪ್ರಭಾವ ಬಳಸಿ ಜಮೀನು ಡಿನೋಟಿಫೈ ಮಾಡಿದ್ದಾರೆಂದು ಆರೋಪಿ ಮೈಸೂರು ಮೂಲದ ಸ್ನೇಹಮಯಿ ಕೃಷ್ಣ ಎಂಬುವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದಾಖಲೆಗಳ ಸಮೇತ ದೂರು ನೀಡಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿ ರಾಜ್ಯಪಲರಿಗೆ ದೂರು ನೀಡಲಾಗಿದೆ. ಮೈಸೂರು ತಾಲೂಕು ವರುಣ ಹೋಬಳಿಯ ಉತ್ತನಹಳ್ಳಿ ಗ್ರಾಮದಲ್ಲಿನ 1.39 ಎಕರೆ ಜಮೀನನ್ನು ಆಶ್ರಯ ಯೋಜನೆಯಡಿ ನಿವೇಶನ ಇಲ್ಲದವರಿಗೆ ಮತ್ತು ಹಿಂದುಳಿದವರಿಗೆ ನೀಡಲು ಜಿಲ್ಲಾಡಳಿತ 1972ರಲ್ಲಿ ಭೂ ಸ್ವಾಧೀನಪಡಿಸಿಕೊಂಡಿತ್ತು.
ಬಳಿಕ ಜಮೀನಿನ ಹಕ್ಕುಪತ್ರಗಳನ್ನು ಫಲಾನುಭವಿಗಳಿಗೆ ಹಂಚಲಾಗಿತ್ತು. ಆದರೆ, ಸದರಿ ಜಮೀನಿನಲ್ಲಿ ಮೂಲಭೂತ ಸೌಕರ್ಯ ಇಲ್ಲದ ಕಾರಣ ಫಲಾನುಭವಿಗಳು ಮನೆ ನಿರ್ಮಾಣ ಮಾಡಿರಲಿಲ್ಲ. ಈ ಜಮೀನು ಖಾಲಿ ಬಿದ್ದಿತ್ತು.
30 ವರ್ಷಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂದಿನ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಈ 1.39 ಎಕರೆ ಜಮೀನನ್ನು ಮಾರಪ್ಪ ಎಂಬ ಹೆಸರಿನ ವ್ಯಕ್ತಿಗೆ ಡಿನೋಟಿಫೈ ಮಾಡುವಂತೆ ಕೋರುತ್ತಾರೆ. ಆದರೆ, ಮಾರಪ್ಪ ಮತ್ತು ಈ ಜಮೀನಿಗೆ ಯಾವುದೇ ಸಂಬಂಧವಿರುದಿಲ್ಲ. ಮಾರಪ್ಪನ ತಂದೆ ಹೆಸರಿನಲ್ಲಿ ಬೇರೊಂದು ಜಾಗದಲ್ಲಿ ಜಮೀನು ಇದೆ.
ಸಿದ್ದರಾಮಯ್ಯ ಪತ್ರ ಆಧರಿಸಿ ಜಿಲ್ಲಾಡಳಿತ 14 ತಿಂಗಳ ಬಳಿಕ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಪ್ಪ ಎಂಬುವರ ಹೆಸರಿಗೆ 1.39 ಎಕರೆ ಜಮೀನನ್ನು ಡಿನೋಟಿಫೈ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಆದರೆ ಮೂಲ ಜಮೀನಿನ ಮಾಲೀಕರು ಮರಪ್ಪ ಅಲ್ಲ, ಆದರೂ ಅವರ ಹೆಸರಿಗೆ ಡಿನೋಟಿಫೈ ಮಾಡಲಾಗಿದೆ. ಈ ವಿಚಾರ ತಿಳಿದ ಫಲಾನುಭವಿಗಳು 2011ರಲ್ಲಿ ಅಂದಿನ ಜಿಲ್ಲದಾಧಿಕಾರಿಗಳಿಗೆ ಪತ್ರ ಬರೆದು, ನಮ್ಮ ಜಮೀನು ನಮಗೆ ನೀಡುವಂತೆ ಮನವಿ ಮಾಡುತ್ತಾರೆ. ಆರೋಪದ ದಾಖಲೆಗಳನ್ನು ಮುಂದಿಟ್ಟು ಸ್ನೇಹಮಯಿ ಕೃಷ್ಣ ಎಂಬುವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.