ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ‘ಕೈ’ ನಾಯಕರ ರಹಸ್ಯ ಸಭೆಗೆ ಹೈಕಮಾಂಡ್ ‘ಗರಂ’

ಬೆಂಗಳೂರು, ಮುಡಾ ಹಗರಣ ರಾಜ್ಯದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿ ಸಂಕಷ್ಟಕ್ಕೆ ಸಿಲುಕಿರುವಾಗಲೇ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ನಾಯಕರುಗಳು ನಡೆಸುತ್ತಿರುವ ಗುಪ್ತ ಸಭೆಗಳು ಕೆಲ ಶಾಸಕರುಗಳು ಪ್ರತ್ಯೇಕವಾಗಿ ಸಭೆ ನಡೆಸಿರುವ ಬಗ್ಗೆ ಗರಂ ಆಗಿರುವ ಹೈಕಮಾಂಡ್, ಇಂತಹ ಯಾವುದೇ ಸಭೆಗಳನ್ನು ನಡೆಸದಂತೆ ತಾಕೀತು ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ಹೈಕಮಾಂಡ್ ಬಲವಾಗಿ ನಿಂತಿರುವಾಗಲೇ ಇಂತಹ ಗುಪ್ತ ಸಭೆಗಳಿಂದ ಬೇರೆ ರೀತಿಯ ಸಂದೇಶಗಳು ರವಾನೆಯಾಗುತ್ತವೆ. ಜತೆಗೆ ಸರ್ಕಾರ ಹಾಗೂ ಪಕ್ಷದ ವರ್ಚಸ್ಸಿಗೂ ಇಂತಹ ಸಭೆಗಳಿಂದ ಧಕ್ಕೆಯಾಗುತ್ತದೆ. ಸಾರ್ವಜನಿಕವಾಗಿಯೂ ಸರ್ಕಾರದ ಸ್ಥಿರತೆ ಬಗ್ಗೆ ಅನುಮಾನಗಳು ಮೂಡುತ್ತವೆ. ಹಾಗಾಗಿ, ಇಂತಹ ಸಭೆಗಳನ್ನು ಯಾರೂ ನಡೆಸದಂತೆ ಹೈಕಮಾಂಡ್ ಕಟ್ಟಪ್ಪಣೆ ವಿಧಿಸಿದೆ.

ರಾಜ್ಯಕಾಂಗ್ರೆಸ್‌ನಲ್ಲಿ ನಡೆದಿರುವ ನಾಯಕರುಗಳ ಭೇಟಿ, ಸಭೆ, ಸಮಾಲೋಚನೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಹೈಕಮಾಂಡ್ ಯಾರು ಯಾವಾಗ ಎಲ್ಲೆಲ್ಲಿ ಗುಪ್ತ ಸಭೆಗಳನ್ನು ನಡೆಸಿದ್ದಾರೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಇಂತಹ ಸಭೆಗಳು ಬಂದ್ ಆಗಬೇಕು. ಮುಂದೆ ಈ ರೀತಿಯ ಸಭೆ ನಡೆಸಿದರೆ ಶಿಸ್ತುಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಹೈಕಮಾಂಡ್ ಕೆಲ ಶಾಸಕರುಗಳಿಗೆ ನೀಡಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

Advertisement

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಬಹಿರಂಗವಾಗಿ ಎಲ್ಲರೂ ಹೇಳುತ್ತಿದ್ದರಾದರೂ ಒಳಗೊಳಗೆ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕೆಲ ನಾಯಕರುಗಳು ತಮ್ಮ ಆಪ್ತ ಶಾಸಕರುಗಳ ಜತೆ ಸಭೆ ಸಮಾಲೋಚನೆ ನಡೆಸಿರುವುದು ಹೈಕಮಾಂಡ್ ಸಿಟ್ಟಿಗೆ ಕಾರಣವಾಗಿದೆ. ಹಾಗಾಗಿ ಹೈಕಮಾಂಡ್ ಇಂತಹ ಯಾವುದೇ ಸಭೆಗಳನ್ನು ನಡೆಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಗುಪ್ತ ಸಭೆಗಳಿಗೆ ಬ್ರೇಕ್ ಹಾಕಿ ಎಲ್ಲ ನಾಯಕರು ಹಾಗೂ ಶಾಸಕರಗಳ ಜತೆ ಮಾತನಾಡಿದ ಒಗ್ಗಟ್ಟನ್ನು ಪ್ರದರ್ಶಿಸುವ ಸಂದೇಶವನ್ನು ರವಾನಿಸಲು ವರಿಷ್ಠರು ಈ ತಿಂಗಳ 15 ಇಲ್ಲವೇ 16 ರಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಎಲ್ಲ ಪ್ರಮುಖ ನಾಯಕರುಗಳು ಹಾಗೂ ಶಾಸಕರುಗಳ ಜತೆ ಸಭೆ ನಡೆಸುವರು ಎಂದು ಹೇಳಲಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆ ಮೇರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಇವರುಗಳು ಈ ತಿಂಗಳ ೧೫ ಇಲ್ಲವೇ 16 ರಂದು ರಾಜ್ಯಕ್ಕೆ ಬರಲಿದ್ದು, ರಾಜ್ಯ ಕಾಂಗ್ರೆಸ್‌ನಲ್ಲಿ ನಡೆದಿರುವ ಆಂತರಿಕ ಗುಪ್ತ ಸಭೆಗಳಿಗೆ ಬ್ರೇಕ್ ಹಾಕುವರು ಎಂದು ಹೇಳಲಾಗಿದೆ.

ಹೈಕಮಾಂಡ್ ಆಂತರಿಕ ಸಭೆಗಳನ್ನು ನಡೆಸದಂತೆ ಸೂಚನೆ ನೀಡಿದ್ದರೂ ಕೆಲ ಸಚಿವರುಗಳು ಪರಸ್ಪರ ಭೇಟಿಯಾಗಿ ಪ್ರತ್ಯೇಕವಾಗಿ ಮಾತನಾಡುತ್ತಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಕಾಂಗ್ರೆಸ್‌ನಲ್ಲಿ ಏನೋ ನಡೆಯುತ್ತಿದೆ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ. ಹಾಗಾಗಿ ಹೈಕಮಾಂಡ್ ಇದಕ್ಕೆಲ್ಲ ಫುಲ್‌ಸ್ಟಾಪ್ ಇಡಲು ತೀರ್ಮಾನಿಸಿ ಈ ತಿಂಗಳ 15 ಇಲ್ಲವೇ 16 ರಂದು ಎಲ್ಲ ನಾಯಕರ ಜತೆ ಸಮಾಲೋಚಿಸಿ ಒಂದು ನಿರ್ಧಾರ ಪ್ರಕಟಿಸಲಿದೆ ಎಂದು ಹೇಳಲಾಗಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement