ಸಿದ್ದರಾಮಯ್ಯನವರೇ ಆರೋಪಿ ನಂಬರ್ 1- ವಿಜಯೇಂದ್ರ

ಬೆಂಗಳೂರು: ಪರಿಶಿಷ್ಟ ಸಮುದಾಯಗಳಿಗೆ ದ್ರೋಹ ಬಗೆದ ಭ್ರಷ್ಟ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇರಬೇಕೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಪ್ರಶ್ನಿಸಿದರು. ಇದಕ್ಕೆ ‘ಬೇಡ ಬೇಡ’ ಎಂದು ಕಾರ್ಯಕರ್ತರಿಂದ ಉತ್ತರ ಲಭಿಸಿತು.

ನಾಲ್ಕನೇ ದಿನವಾದ ಇಂದು ಮೈಸೂರು ಚಲೋ ಪಾದಯಾತ್ರೆಯು ಮದ್ದೂರಿಗೆ ತಲುಪಿದ ಸಂದರ್ಭದಲ್ಲಿ ವಿಜಯೇಂದ್ರ ಅವರು ಮಾತನಾಡಿದರು.ಮೈಸೂರಿನ ಸಾವಿರಾರು ಕೋಟಿಯ ಮೂಡ ನಿವೇಶನ ಹಗರಣ, ವಾಲ್ಮೀಕಿ ನಿಗಮದ ಹಣ ಅವ್ಯವಹಾರದ ಹಗರಣಗಳಲ್ಲಿ ಆರೋಪಿ ನಂಬರ್ 1 ಯಾರೆಂದು ನೋಡಿದರೆ ಅದು ಸ್ವತಃ ಸಿದ್ದರಾಮಯ್ಯನವರೇ ಆಗಿದ್ದಾರೆ. ಇಂಥ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ಕೊಡುವವರೆಗೂ ಹೋರಾಟ ನಿಲ್ಲುವುದಿಲ್ಲ. ಬಿಜೆಪಿ- ಜೆಡಿಎಸ್ ಪಕ್ಷಗಳು ಒಂದಾಗಿ ಹೋರಾಟ ಮುಂದುವರೆಸುತ್ತೇವೆ ಎಂದು ಪ್ರಕಟಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಎಸ್‌ಐಟಿ ಚಾರ್ಜ್ ಶೀಟ್ ಸಲ್ಲಿಸಿದೆ. ಆದರೆ, ಭ್ರಷ್ಟರಾದ ಮಾಜಿ ಸಚಿವ ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ದದ್ದಲ್ ಹೆಸರನ್ನು ಚಾರ್ಜ್ ಶೀಟ್‌ನಿಂದ ಬಿಟ್ಟಿದ್ದಾರೆ. ಅವರಿಬ್ಬರನ್ನು ಅಪರಾಧಿ ಎಂದು ಮಾಡಿದರೆ, ಮುಂದೆ ನಾಳೆ ದಿನ ಸಿದ್ದರಾಮಯ್ಯನವರೇ ಅಪರಾಧಿ (ಅಕ್ಯೂಸ್ಡ್) ನಂಬರ್ 1 ಆಗುತ್ತಾರೆ. ಆ ಕಾರಣಕ್ಕಾಗಿ ಹೆಸರು ಕೈಬಿಡುವ ಕೆಲಸ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

Advertisement

ದಲಿತರು, ಪರಿಶಿಷ್ಟ ಜಾತಿ, ಪಂಗಡಗಳ ಹೆಸರು ಹೇಳಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ನಾಡಿನ ದಲಿತ ಸಮುದಾಯಗಳಿಗೆ ಮೀಸಲಿಟ್ಟ ಹಣ ಲೂಟಿ ಮಾಡಿದೆ ಎಂದು ಟೀಕಿಸಿದರು. ಯಾದಗಿರಿಯಲ್ಲಿ ಕಾಂಗ್ರೆಸ್ ಶಾಸಕರು ದಲಿತ ಸಮುದಾಯಕ್ಕೆ ಸೇರಿದ ಪೊಲೀಸ್ ಅಧಿಕಾರಿಯಿಂದ 30 ಲಕ್ಷ ಹಣ ಪಡೆದು ಅವರ ಸಾವಿಗೆ ಕಾರಣರಾಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್. ಇಂದ್ರೇಶ್ ಕುಮಾರ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕ ಅರವಿಂದ ಬೆಲ್ಲದ, ರಾಜ್ಯ ಎಸ್‌ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಸಂಸದರು, ಶಾಸಕರು, ಮಾಜಿ ಜನಪ್ರತಿನಿಧಿಗಳು, ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement