ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟು ಕೆಳಗೆ ಇಳಿಯಲಿ. 24 ಗಂಟೆಗಳಲ್ಲಿ ಪ್ರಜ್ವಲ್ ರೇವಣ್ಣನನ್ನು ಬಂಧಿಸುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸವಾಲು ಹಾಕಿದ್ದಾರೆ. ಬಿಜೆಪಿ ಕಚೇರಿಯಲ್ಲಿ ನಿನ್ನೆ (ಬುಧವಾರ) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿಯನ್ನೇ ನಡೆಸಿದರು.
‘ಪ್ರಜ್ವಲ್ ರೇವಣ್ಣ ಅವರನ್ನು ದೇಶ ಬಿಟ್ಟು ಹೇಗೆ ಹೋಗಲು ಬಿಟ್ರಿ? ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಪ್ರಶ್ನಿಸುತ್ತಿದೆ. ಹಾಗಾದರೆ, ರಾಜ್ಯದಲ್ಲಿ ನಿಮ್ಮದೇ ಸರ್ಕಾರ ಇದ್ದಾಗ ಪ್ರಜ್ವಲ್ ಅವರನ್ನು ಹಾಸನದಿಂದ ಬೆಂಗಳೂರು ಏರ್ ಪೋರ್ಟ್ ಹೋಗಲು ಹೇಗೆ ಬಿಟ್ರಿ? ರಾಜ್ಯದ ಪೊಲೀಸ್ ಇಲಾಖೆ ನಿಮ್ಮ ಅಧೀನದಲ್ಲಿ ಇದೆ ಅಲ್ವಾ? ಸರ್ಕಾರದ ಪೊಲೀಸರು ಏನು ಮಾಡ್ತಿದ್ದರು? ಇದಕ್ಕೆ ಕಾಂಗ್ರೆಸ್ ಉತ್ತರ ಕೊಡಲಿ, ಮತ್ತೆ ನಾವು ಉತ್ತರ ಕೊಡುತ್ತೇವೆ ಎಂದು ಕಿಡಿಕಾರಿದರು. ಡಿಕೆ ಶಿವಕುಮಾರ್ ಹೇಳುವುದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಬೇಡಿ. ರಾಮೇಶ್ವರಂ ಕೆಫೆ ಬಾಂಬ್ ಬ್ಯುಸಿನೆಸ್ ಹಿನ್ನೆಲೆ ಇದೆ ಅಂದರು. ಅದು ಸುಳ್ಳಲ್ವಾ? ಡಿಕೆ ಶಿವಕುಮಾರ್ ಮಾತಿಗೆ ನಯಾ ಪೈಸೆ ಕಿಮ್ಮತ್ತು ಇಲ್ಲ. ಕುಕ್ಕರ್ ಬಾಂಬ್ ಹಾಕಿದವನನ್ನು ಬ್ರದರ್ ಅಂದ್ರು. ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು. ಅಮಿತ್ ಶಾ ಪ್ರಜ್ವಲ್ಗೆ ಟಿಕೆಟ್ ಕೊಡಬೇಡಿ ಅಂದಿದ್ದು ಹೇಗೆ ಗೊತ್ತಾಯ್ತು ಇವರಿಗೆ? ಅಮಿತ್ ಶಾ ಫೋನ್ ಟ್ಯಾಪ್ ಮಾಡಿದ್ದಾರಾ ಡಿಕೆಶಿ ಎಂದು ಪ್ರಶ್ನಿಸಿದರು. ಮೈತ್ರಿಯ ಲೆಕ್ಕಾಚಾರದ ಪ್ರಕರಾ ಮೂರು ಸ್ಥಾನ ಜೆಡಿಎಸ್ಗೆ ಕೊಡಲಾಗಿತ್ತು. ಪ್ರಜ್ವಲ್ಗೆ ಟಿಕೆಟ್ ಕೊಟ್ಟಿದ್ದು ಜೆಡಿಎಸ್ ಎಂದು ಆರ್. ಅಶೋಕ್ ಸ್ಪಷ್ಟಪಡಿಸಿದರು. ಇನ್ನು ಬಿಜೆಪಿ ಮುಖಂಡ ದೇವರಾಜೇಗೌಡ ಪತ್ರದ ಬಗ್ಗೆ ರಾಜ್ಯದ ಅಧ್ಯಕ್ಷ ವಿಜಯೇಂದ್ರ ಪತ್ರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಒಂದು ವೇಳೆ ಪ್ರಜ್ವಲ್ ರೇವಣ್ಣ ಗೆದ್ದರೆ, ಅವರ ವಿರುದ್ಧದ ಆರೋಪಕ್ಕೆ ಕಠಿಣ ಕ್ರಮ ನಾವು ಕೈಗೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ನಾವು ಬೆಂಬಲ ಕೊಡಲ್ಲ ಎಂದರು. ಎಸ್ ಐ ಟಿ ರಚನೆ ಮಾಡಿದ ಬಳಿಕ ಕಾನೂನಾತ್ಮಕವಾಗಿ ಯಾವಾಗ ಬಂಧನ ಮಾಡಬೇಕು ಎಂಬುದು ಅವರಿಗೆ ಸ್ವಾತಂತ್ರ್ಯ ಇದೆ. ನಿಯಮಾವಳಿ ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ಅದನ್ನು ನಾವು ಆಗ್ರಹ ಮಾಡ್ತೀವಿ ಎಂದರು.