ಬೆಂಗಳೂರು: ದೇಶಕ್ಕಾಗಿ ದಿನದಲ್ಲಿ ಹದಿನೆಂಟು ಗಂಟೆ , ಒಂಭತ್ತುವರೆ ವರ್ಷದಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದೆ ಕಠಿಣ ಪರಿಶ್ರಮಿ, ಅಪ್ಪಟ ದೇಶಭಕ್ತ ನಮ್ಮ ಪ್ರಧಾನಿ ನರೇಂದ್ರ ಮೋದಿ ಭಾರತದ ಇತಿಹಾಸದಲ್ಲಿ ದಾಖಲೆಯ ಅಭಿವೃದ್ಧಿಯನ್ನು ಮಾಡಿದ್ದಾರೆ.
ಅವರ ಬಗ್ಗೆ ಗಾಢ ನಿದ್ರೆ ಎಂದು ಮಾತನಾಡುವ ಸಿದ್ದರಾಮಯ್ಯ ತಮ್ಮ ಗಾಢ ನಿದ್ರೆಯಿಂದ ಈಗ ಎಚ್ಚೆತ್ತುಕೊಂಡಂತೆ ಕಾಣಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಟ್ವೀಟ್‌ಗೆ ತಿರುಗೇಟು ನೀಡಿರುವ ಅವರು, ಯುಪಿಎ 2004-2014ರ ಹತ್ತು ವರ್ಷದ ಆಡಳಿತದಲ್ಲಿ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ 81,795.19 ಕೋಟಿ ರೂ. ಹಾಗೂ ಅನುದಾನ ಹಂಚಿಕೆ ರೂಪದಲ್ಲಿ 60779.84 ಕೋಟಿ ರೂ. ಹಣ ಬಂದರೆ.
ಮೋದಿ ಅವಧಿಯಲ್ಲಿ 2014-2023 ಡಿಸೆಂಬರ್‌ವರೆಗೆ ತೆರಿಗೆ ಹಂಚಿಕೆಯಲ್ಲಿ 2,82,791 ಕೋಟಿ ರೂ. ಬಂದರೆ, ಅನುದಾನ ಹಂಚಿಕೆಯಲ್ಲಿ 2,08,882.02 ಕೋಟಿ ರೂ. ಬಂದಂತಹ ಹಣ ಇವರ ಕಣ್ಣಿಗೆ ಕಾಣುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮೇ ತಿಂಗಳಲ್ಲಿ 360 ಕೋಟಿ ರೂ. ಬಿಡುಗಡೆಯಾಗಿದ್ದು, ಈಗ ಮತ್ತೆ 348 ಕೋಟಿ ರೂ. ಬಿಡುಗಡೆಗೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಆದರೆ ರಾಜ್ಯ ಸರ್ಕಾರ ರೈತರಿಗೆ ಬಿಡಿಗಾಸು ಕೊಡಲು ಸಾಧ್ಯವಾಗಿಲ್ಲ. ಪೂರ್ಣ ಪ್ರಮಾಣದಲ್ಲಿ ಪರಿಹಾರ ಕೊಡಲು ನಿಮ್ಮ ಬೊಕ್ಕಸ ಖಾಲಿಯಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.