ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಇನ್ನೂ ಐದು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ 15 ಜಿಲ್ಲೆಗಳಲ್ಲಿ ಇಂದೂ ಸಹ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಗುರುವಾರ ಸಂಜೆ ಸುರಿದ ಮಳೆಯಿಂದಾಗಿ ನಗರದಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಹಲವೆಡೆ ರಸ್ತೆಗಳು ನೀರಿನಿಂದ ತುಂಬಿದ್ದರೆ, ಸಾಕಷ್ಟು ಮರಗಳು ಮಳೆಯ ಹೊಡೆತಕ್ಕೆ ನೆಲಕ್ಕುರುಳಿವೆ.
ಗಾಳಿ ಮಳೆ ತಡೆಯುವ ಶಕ್ತಿ ಕಳೆದುಕೊಂಡಿರುವ ಸಿಲಿಕಾನ್ ಸಿಟಿ ವೃಕ್ಷಗಳು ಸಾಧಾರಣ ಮಳೆಗೆ ಧರಾಶಾಯಿಯಾಗುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಹಳೆ ಮರಗಳು ಆದ ಕಾರಣ ಗಾಳಿ ಮಳೆಗೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಸರಿಯಾದ ವಿಧಾನದಲ್ಲಿ ನಾಟಿಯಾಗದ ಕಾರಣ ಬೇರುಗಳು ಬಲವಾಗಿಲ್ಲದಿರುವುದೂ ಮರಗಳು ನೆಲಕ್ಕುರುಳಲು ಕಾರಣವಾಗಿದ್ದು, ಕಾಂಕ್ರೀಟಿಕರಣದ ಹೆಸರಿನಲ್ಲಿ ಮರಗಳು ಜೀವ ಕಳೆದುಕೊಂಡಿವೆ. ರಸ್ತೆ ಗುಂಡಿ, ಅಭಿವೃದ್ಧಿ ಕೆಲಸ ಮಾಡುವಾಗ ಮರಗಳ ಬೇರುಗಳನ್ನು ಎಗ್ಗಿಲ್ಲದೇ ಕತ್ತರಿಸಲಾಗಿದ್ದು, ಈ ಹಿನ್ನೆಲೆ ಗಾಳಿ ವೇಗ ತಡೆಯಲಾಗದೆ ನೆಲಕುರುಳುತ್ತಿವೆ. ಸಾರ್ವಜನಿಕರು ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಬೇಕಾಗಿರುವುದು ಅತ್ಯವಶ್ಯವಾಗಿದೆ.